ಚಾಮರಾಜನಗರ: ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರುವಂತ ಫಲಿತಾಂಶ ಬರಲಿ ಎಂದು ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಆಶಯ ವ್ಯಕ್ತಪಡಿಸುವ ಮೂಲಕ ಬಿಎಸ್ವೈ ಸರ್ಕಾರಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ವತಂತ್ರ ಶಾಸಕನಾಗಿರುವೆ. ಉಪಚುನಾವಣೆಯಲ್ಲಿ ತಟಸ್ಥನಾಗಿದ್ದೇನೆ. ಆದರೆ, ಉಪಚುನಾವಣೆಯಂತು ಬಂದಿದ್ದು ಬಿಜೆಪಿ ಸರ್ಕಾರ ಸುಭದ್ರವಾಗಿರುವಷ್ಟು ಫಲಿತಾಂಶ ಬರಲಿ. ಮಧ್ಯಂತರ ಚುನಾವಣೆಯಾಗುವ ಪರಿಸ್ಥಿತಿ ಬೇಡ ಎಂದಿದ್ದಾರೆ.
ಮೈತ್ರಿ ಸರ್ಕಾರಕ್ಕೆ ಹೋಲಿಸಿದರೆ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಸಿಗುವ ನಿರೀಕ್ಷೆ ಇದೆ. ಪ್ರವಾಹ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ಸಿಎಂ ಯಡಿಯೂರಪ್ಪ ನಿರ್ವಹಿಸಿದ್ದಾರೆ. ಎನ್ಡಿಆರ್ಎಫ್ ಸೂಚನೆಗಳನ್ನು ಬದಿಗಿಟ್ಟು, ಪರಿಹಾರ ನೀಡಿದ್ದು ಯಡಿಯೂರಪ್ಪ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ಇದೆ ಎಂದರು.
ಬಿಜೆಪಿ ಸೇರ್ಪಡೆ ಮತ್ತು ಉಪಚುನಾವಣೆ ಫಲಿತಾಂಶ ನಂತರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು. ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲಬೇಕೆಂಬ ಬಿಎಸ್ಪಿ ಕಾರ್ಯಕರ್ತರ ಸವಾಲು ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ತಾಕತ್ತು ಇಲ್ಲ, ಅವರೇ ನನ್ನನ್ನು 20 ವರ್ಷದಿಂದ ಸಾಕಿದವರು. ಅವರ ವಿರುದ್ಧ ನಾನು ಹೇಗೆ ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.