ಚಾಮರಾಜನಗರ: ಶ್ರೀಲಂಕಾದ ವಿಶ್ವ ವಿಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೈಗಾರಿಕೋದ್ಯಮಿಯಾಗುತ್ತಿದ್ದಾರೆ. ತಮ್ಮ ಉದ್ಯಮವನ್ನು ಕರ್ನಾಟಕದ ಚಾಮರಾಜನಗರದಲ್ಲಿ ಆರಂಭಿಸುತ್ತಿದ್ದಾರೆ.
ಗಡಿಜಿಲ್ಲೆ ಚಾಮರಾಜನಗರದ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಫ್ಟ್ ಡ್ರಿಂಕ್ ಕಾರ್ಖಾನೆಯನ್ನು ಆರಂಭಿಸುತ್ತಿದ್ದು, 46 ಎಕರೆ ಪ್ರದೇಶವನ್ನು ಖರೀದಿಸಿದ್ದಾರೆ. ಸರ್ಕಾರದಿಂದ ಪಡೆಯಬೇಕಾದ ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿ ಕಾರ್ಖಾನೆಯ ನಿರ್ಮಾಣದ ಕಾರ್ಯ ಆರಂಭಿಸಿದ್ದಾರೆ. ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಡ್ರಿಂಕ್, ಕೂಲ್ ಡ್ರಿಂಕ್, ಸುವಾಸಿತ ಹಾಲನ್ನು ಕ್ಯಾನ್ಗಳಲ್ಲಿ ಮಾರಾಟ ಮಾಡಲಿದ್ದು ಚಾಮರಾಜನಗರದಲ್ಲಿ ಸಾಫ್ಟ್ ಡ್ರಿಂಕ್ ಹಾಗೂ ನಾನ್ ಆಲ್ಕೋಹಾಲಿಕ್ ಡ್ರಿಂಕ್ಗಳು ತಯಾರಾಗಲಿದೆ ಎಂದು ತಿಳಿದು ಬಂದಿದೆ.
ಆರಂಭಿಕ ಹಂತದಲ್ಲಿ 250 ಕೋಟಿಗೂ ಅಧಿಕ ಮೊತ್ತದ ಹಣವನ್ನು ಚಾಮರಾಜನಗರದಲ್ಲಿ ಹೂಡಿಕೆ ಮಾಡುತ್ತಿದ್ದು ಸ್ಥಳೀಯವಾಗಿ ನೂರಾರು ಮಂದಿಗೆ ನೌಕರಿ ಸಿಗಲಿದೆ. ಕ್ರಿಕೆಟಿಗ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಿಸುವುದರಿಂದ ಮತ್ತಷ್ಟು ಕೈಗಾರಿಕೆಗಳನ್ನು ಸೆಳೆಯಲು ಅನುಕೂಲವಾಗಲಿದೆ. ಈಗಾಗಲೇ ಬಿರ್ಲಾ ಗ್ರೂಪಿನಿಂದ ಪರಿಸರಸ್ನೇಹಿ ಬಣ್ಣದ ಕಾರ್ಖಾನೆ ಕೂಡ ನಿರ್ಮಾಣವಾಗುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಗುಂಡ್ಲುಪೇಟೆಯಲ್ಲಿ ಭೂಮಿ ಖರೀದಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೇ ಮುತ್ತಯ್ಯ ಕೈಗಾರಿಕೋದ್ಯಮಿಯಾಗಿ ಚಾಮರಾಜನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಸಿಲೋನ್ ಬೆವರೇಜ್ ಕ್ಯಾನ್ (ಪ್ರೈ) ಲಿಮಿಟೆಡ್‌ನ ಸಹಯೋಗದಲ್ಲಿ ತಂಪು ಪಾನೀಯ ಉತ್ಪಾದನೆಯ ಬಗ್ಗೆ ವರದಿಯನ್ನು ಸಲ್ಲಿಸಿದರು. ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 46.30 ಎಕರೆ ಭೂಮಿಯನ್ನು ಗುತ್ತಿಗೆ ಮಂಜೂರು ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಪ್ರಸಾದ್, ಚಾಮರಾಜನಗರದಲ್ಲಿ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬೃಹತ್ ಕಾರ್ಖಾನೆ ಸ್ಥಾಪನೆ ಮಾಡುತ್ತಿದ್ದಾರೆ. ನಿರ್ಮಾಣದ ವೇಗ ಗಮನಿಸಿದರೆ ಇನ್ನು 6 ತಿಂಗಳಲ್ಲಿ ಉತ್ಪಾದನೆ ಆರಂಭವಾಗಲಿದೆ. ನಾನ್ ಅಲ್ಕೋಹಾಲಿಕ್ ಸಾಫ್ಟ್ ಡ್ರಿಂಕ್ಸ್ನ್ನು ಇಲ್ಲಿ ಉತ್ಪಾದನೆ ಮಾಡಲಿದ್ದು, ಸುಮಾರು 900ಕ್ಕೂ ಅಧಿಕ ಮಂದಿಗೆ ಉದ್ಯೋಗವಕಾಶ ದೊರೆಯಲಿದೆ. ಒಟ್ಟು 400 ಕೋಟಿ ರೂ. ಹೂಡಿಕೆ ಆಗಲಿದೆ ಎಂದು ತಿಳಿಸಿದರು.
ಧಾರವಾಡದಲ್ಲೂ ತಂಪು ಪಾನೀಯ ಘಟಕ ಸ್ಥಾಪನೆ : ಮುತ್ತಯ್ಯ ಮುರಳೀಧರನ್ ಅವರು ಕಳೆದ ಆಗಸ್ಟ್ 5ರಂದು ತಂಪು ಪಾನೀಯ ಘಟಕ ಪ್ರಾರಂಭಿಸಲು ಧಾರವಾಡಕ್ಕೆ ಭೇಟಿ ನೀಡಿದ್ದರು. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಬಳಿ ಇರುವ ಜಮೀನು ಒಂದನ್ನು ವೀಕ್ಷಣೆ ಮಾಡಿ ಹೋಗಿದ್ದರು.
ಕೈಗಾರಿಕೆ ಸ್ಥಾಪನೆಗೆ ಎಫ್ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 256.30 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು, ಇದಕ್ಕಾಗಿ 15 ಎಕರೆ ಭೂಮಿ ಒದಗಿಸಲಾಗಿದೆ. ಒಟ್ಟು ಮೂರು ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ಯೋಜಿಸಿದೆ. ಇದಕ್ಕಾಗಿ 32 ರಿಂದ 36 ಎಕರೆ ಭೂಮಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದೆ ಎಂದು ಕೆಐಎಡಿಬಿ ಅಧಿಕಾರಿ ಬಿ.ಟಿ. ಪಾಟೀಲ ತಿಳಿಸಿದ್ದರು.
ಇದನ್ನೂ ಓದಿ: Maharaja Trophy: ಮಹಾರಾಜ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಶರತ್; ಮಂಗಳೂರು ಡ್ರ್ಯಾಗನ್ಸ್ ಜಯಭೇರಿ