ಚಾಮರಾಜನಗರ: ಕುರಿಗಾಹಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಾದೇವಗೌಡ(53) ಮೃತ ದುರ್ದೈವಿ. ದುಷ್ಕರ್ಮಿಗಳು ಕುತ್ತಿಗೆ ಬಿಗಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮೃತರು ತೋಟದ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದು 100 ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದರು ಎಂದು ತಿಳಿದುಬಂದಿದೆ. ಇನ್ನು, ನಿನ್ನೆ ಸಂಜೆ ಕುರಿಗಳು ಮನೆಗೆ ವಾಪಸ್ ಆದರೂ ಮಹಾದೇವಗೌಡ ಮಾತ್ರ ಬಂದಿರಲಿಲ್ಲ. ಆದ್ದರಿಂದ ಇಂದು ಬೆಳಗ್ಗೆ ಹುಡುಕಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು, ಕುರಿಗಾಹಿ ಬಳಿಯಿದ್ದ 10 ಸಾವಿರಕ್ಕೂ ಹೆಚ್ಚು ನಗದು, 6-7 ಕುರಿ ಹಾಗೂ ಧರಿಸಿದ್ದ ಉಂಗುರ ಇಲ್ಲ ಎಂದು ಮೃತನ ಪತ್ನಿ ತಿಳಿಸಿದ್ದಾರೆ.
ಸ್ಥಳಕ್ಕೆ ಸಂತೇಮರಹಳ್ಳಿ ಹಾಗೂ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.