ಚಾಮರಾಜನಗರ: ಮುಂಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ, ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳುವ ಮೂಲಕ ವಿಜಯೇಂದ್ರ ಆಪ್ತ, ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ಗೆ ಠಕ್ಕರ್ ಕೊಟ್ಟರು. ಚಾಮರಾಜನಗರದಲ್ಲಿ ನಡೆದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗಿಯಾಗಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜನಗರಕ್ಕೆ ಬಂದು ಯಾರಾದರೂ ಓಡಾಡಲಿ, ಪ್ರಜಾಪ್ರಭುತ್ವದಲ್ಲಿ ಅದನ್ನು ತಡೆಯಲಾಗಲ್ಲ. ಬಿ.ಎಲ್.ಸಂತೋಷ್ ಸ್ಪಷ್ಟವಾಗಿ ತಿಳಿಸಿದ್ದು ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಸಿಗಲಿದೆ ಕಾದು ನೋಡಿ, 100% ಸ್ಥಳೀಯರಿಗೆ ಟಿಕೆಟ್ ಎಂದು ಹೇಳಿದರು.
ಹಾಲಿ ಶಾಸಕರಿಗೆ ಟಿಕೆಟ್: ಸಂಸದರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಕೊಡಲಾಗುತ್ತದೆ ಎನ್ನುವ ಮೂಲಕ ಕೊಳ್ಳೇಗಾಲದಲ್ಲಿ ಶಾಸಕ ಎನ್.ಮಹೇಶ್ ಹಾಗೂ ಗುಂಡ್ಲುಪೇಟೆಗೆ ಸಿ.ಎಸ್.ನಿರಂಜನ ಕುಮಾರ್ ಹೆಸರು ಫೈನಲ್ ಆಗಿರುವ ಬಗ್ಗೆ ಪರೋಕ್ಷ ಸುಳಿವು ಕೊಟ್ಟರು.
ಪಲಾಯನವಾದಿ ಸಿದ್ದರಾಮಯ್ಯ: ಸರ್ವೇ ಪ್ರಕಾರ ಕಾಂಗ್ರೆಸ್ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರದಲ್ಲಿದ್ದವರು ಸೋತು 141 ಸ್ಥಾನ ಎಂದು ಹೇಳುತ್ತಿರುವುದು ಕಾಂಗ್ರೆಸ್ನ ಆಶಾವಾದಿತನ, ಕ್ಷೇತ್ರದಿಂದ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿರುವ ಸಿದ್ದರಾಮಯ್ಯ ಹಾಗೂ ಅವರ ಪಕ್ಷದವರು 141 ಗೆಲ್ಲುತ್ತದೆ ಎಂದು ಹೇಳಿದರೆ ನಾವು ಸರ್ಕಾರದಲ್ಲಿರುವವರು ಎಷ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಹೇಳಬಹುದು. ನಮಗೆ ಸ್ಪಷ್ಟ ಬಹುಮತ ಸಿಗಲಿದೆ, ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದರು.
ಕಾಡಾ ಅಧ್ಯಕ್ಷರ ಆಕ್ರೋಶ: ಕಾಡಾ ಅಧ್ಯಕ್ಷ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಜಗುಣರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು ಸ್ಥಳೀಯರಿಗೆ ಟಿಕೆಟ್ ಎಂದು ಹೇಳಿದ್ದಾರೆ. ಕಾಸು ಇದ್ದವರು ಬಂದು ಇಲ್ಲಿ ನಾಟಕ ಮಾಡಿಸಬಹುದು, ಹಣ ಕೊಡಬಹುದು ಎಂದು ರುದ್ರೇಶ್ ವಿರುದ್ಧ ಆಕ್ರೋಶ ಹೊರಹಾಕಿದರು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರಿಗೆ ರುದ್ರೇಶ್ ಓಡಾಡುತ್ತಿರುವ ಬಗ್ಗೆ ಗಮನಕ್ಕೆ ತಂದ ವೇಳೆ ನಾವು ಯಾರನ್ನೂ ಕಳುಹಿಸಿಲ್ಲ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೆಸರು ದುರ್ಬಳಕೆ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಮದಾಸ್‌ಗೆ ಈ ಬಾರಿ ಟಿಕೆಟ್ ಬೇಡ, ಬೇರೆ ವಿಪ್ರರಿಗೆ ನೀಡಿ: ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ
ಕೆಆರ್ಐಡಿಎಲ್ ಮೂಲ ಉದ್ದೇಶ ಈಡೇರಿಸಲು ವಿಫಲ: ಸಿಎಜಿ ವರದಿಯಲ್ಲಿ ಬಹಿರಂಗ
ಮನೆ ಮಾಡಿರುವ ರುದ್ರೇಶ್: ವಿಜಯೇಂದ್ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರುದ್ರೇಶ್ ಕಳೆದ 6-7 ತಿಂಗಳುಗಳಿಂದ ಚಾಮರಾಜನಗರದಲ್ಲಿ ಓಡಾಡುತ್ತಿದ್ದು ತಾವು ಕೂಡ ಟಿಕೆಟ್ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಸುಸಜ್ಜಿತ, ಮನೆ ಹಾಗೂ ಕಚೇರಿಯನ್ನು ತೆರೆದು ತಮ್ಮದೇ ಅನುಯಾಯಿಗಳ ಮೂಲಕ ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್ಗೆ ಹೋಗುತ್ತದೆ: ಅಮಿತ್ ಶಾ