ಕೊಳ್ಳೇಗಾಲ/ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಲು ಕಾಂಗ್ರೆಸ್ಗೆ ಹಕ್ಕೇನಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ವಿರುದ್ಧ 'ಹೆಬ್ಬೆಟ್ ಗಿರಾಕಿ' ಎಂಬ ಪದ ಬಳಸಿ ಕಾಂಗ್ರೆಸ್ ಮಾಡಿರುವ ಟ್ವೀಟ್ಗೆ ತಿರುಗೇಟು ನೀಡಿದರು.
ಸಮರ್ಥ ನಾಯಕರಿಲ್ಲದೆ ಕಾಂಗ್ರೆಸ್ ದಿವಾಳಿ : ಸಮರ್ಥ ನಾಯಕರಿಲ್ಲದೆ ಕಾಂಗ್ರೆಸ್ ದಿವಾಳಿಯಾಗಿದೆ. ಪಾರ್ಲಿಮೆಂಟ್ನಲ್ಲಿ ಮಾತನಾಡುವಂತವರು ಅವರ ಪಕ್ಷದಲ್ಲಿ ಒಬ್ಬರೂ ಇಲ್ಲ. ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅದರ ಬಗ್ಗೆ ಆಲೋಚಿಸಬೇಕು. ಕಾಂಗ್ರೆಸ್ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಸಮರ್ಥ ನಾಯಕರಿಲ್ಲದೆ ದಿವಾಳಿಯಾಗಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.
ಇಡೀ ವಿಶ್ವವೇ ಕೊರೊನಾದಿಂದ ತಲ್ಲಣಿಸಿದೆ. ಭಾರತ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿದೆ. ಮೋದಿ ಅವರ ಕಾರ್ಯದ ಬಗ್ಗೆ, ದಕ್ಷತೆ ಬಗ್ಗೆ ಕಾಂಗ್ರೆಸ್‌ನವರಿಗೆ ಮಾತನಾಡುವ ಹಕ್ಕು ಇಲ್ಲ. ಸ್ವಂತ ಬಲದಲ್ಲಿ ಲಸಿಕೆ ಉತ್ಪಾದಿಸಿ ನಾಗರಿಕರಿಗೆ ನೀಡುವ ಜತೆಗೆ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
2ನೇ ಅವಧಿಗೆ ಮೋದಿ ಅವರನ್ನು ಜನರು ಸುಮ್ಮನೆ ಆಯ್ಕೆ ಮಾಡಿಲ್ಲ ಎಂದು ಪ್ರಧಾನಿ ವಿರುದ್ಧದ ಕಾಂಗ್ರೆಸ್ ಟೀಕೆಗಳ ವಿರುದ್ಧ ಹರಿಹಾಯ್ದರು. ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಾ ಕೂರುವ ಬದಲು, ದಿವಾಳಿಯಾಗಿರುವ ಅವರ ಪಕ್ಷವನ್ನು ಸಂಘಟಿಸುವತ್ತ ಗಮನಹರಿಸಲಿ ಎಂದು ಇದೇ ವೇಳೆ ಕೈ ನಾಯಕರಿಗೆ ಟಾಂಗ್ ಕೊಟ್ಟರು.