ಚಾಮರಾಜನಗರ : ಹೈಕಮಾಂಡ್ ನಡುವಿನ ಒಪ್ಪಂದದಂತೆ ಬಿ ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆಂದು ಸಂಸದ ಶ್ರೀನಿವಾಸಪ್ರಸಾದ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 75 ವರ್ಷ ಮೇಲ್ಪಟ್ಟವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು ಯಡಿಯೂರಪ್ಪ ಅವರಿಗಾಗಿ ಬದಲಿಸಿ ಸಿಎಂ ಸ್ಥಾನ ಕೊಟ್ಟಿದ್ದಾರೆ. ಎರಡು ವರ್ಷಗಳ ಬಳಿಕ ರಾಜೀನಾಮೆ ಕೊಡಬೇಕೆಂತಲೂ ಒಪ್ಪಂದ ಆಗಿತ್ತು.
ಆ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಕೊಡಲಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ಬಹಳ ಗೌರವಯುತವಾಗಿ ಕಂಡಿದ್ದಾರೆ. ರಾಜೀನಾಮೆ ಕೊಡುವ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಹೈಕಮಾಂಡ್ ಮತ್ತು ಬಿಎಸ್‌ವೈ ಅವರ ನಡುವಿನ ವಿಚಾರ ಇದಾಗಿದ್ದು, ಮೂರನೇಯವರು ಮಾತನಾಡಬಾರದು. ಸ್ವಾಮೀಜಿಗಳು ಯಡಿಯೂರಪ್ಪ ಅವರೇ ಮುಂದುವರೆಯಬೇಕೆಂದು ಹೇಳುತ್ತಿದ್ದಾರೆ. ಅವರೇನು ಸೂಪರ್ ಹೈಕಮಾಂಡಾ ಎಂದು ಮಠಾಧೀಶರ ವಿರುದ್ಧ ಕಿಡಿಕಾರಿದರು.
ಹಳ್ಳಿಹಕ್ಕಿ ವಿರುದ್ಧ ಗುಡುಗು : ಹೆಚ್ ವಿಶ್ವನಾಥ್ ಹೇಳಿಕೆಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ, ನಾವು ಪಕ್ಷ ಕಟ್ಟಿದವರಲ್ಲ. ಬೇರೆ ಪಕ್ಷದಲ್ಲಿ ಅನ್ಯಾಯ ಆಯಿತೆಂದು ನಾನು, ವಿಶ್ವನಾಥ್ ಇಲ್ಲಿಗೆ ಬಂದವರು. ಪಕ್ಷ ಬಲಪಡಿಸುವ ಕೆಲಸ ಮಾಡಬೇಕೇ ಹೊರತು ಹೊರೆಯಾಗಬಾರದು. ತೆವಳಿಗೆಲ್ಲ ಹೇಳಿಕೆ ಕೊಡಬಾರದು. ನಾನು ಅಥವಾ ವಿಶ್ವನಾಥ್ ಅವರೇನು ಹೈಕಮಾಂಡಾ ಎಂದು ವಾಗ್ದಾಳಿ ನಡೆಸಿದರು.
ಮಾತು ಬದಲಿಸಿದ ಸಿದ್ದರಾಮಯ್ಯ : ದಲಿತ ನಾಯಕರನ್ನು ಸಿಎಂ ಮಾಡುವುದಕ್ಕೆ ಬಿಜೆಪಿಗೆ ಈಗ ಅವಕಾಶವಿದೆ ಎಂದು ಹೇಳೋಕೆ ಸಿದ್ದರಾಮಯ್ಯ ಯಾರು?, ವಿಪಕ್ಷದಲ್ಲಿದ್ದಾಗಷ್ಟೇ ಈ ಮಾತುಗಳು ಬರುತ್ತವೆ ಅಷ್ಟೇ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಅವರ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯನವರು ದಲಿತ ನಾಯಕರನ್ನು ಮುಂದಿನ ಸಿಎಂ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ ಮಾತು ಬಲಿಸಿ ಮುಂದಿನ ಮೂಖ್ಯಮಂತ್ರಿ ನಾನೆ ಎಂದೇಳುತ್ತಾ ಅಂಬಾರಿ ಮೇಲೆ ಸುತ್ತಾಡುತ್ತಿದ್ದರು. ಈಗ ಮೈಸೂರು ಜಿಲ್ಲೆ ಬಿಟ್ಟು, ಮುಂದಿನ ಚುನಾವಣೆಯಲ್ಲಿ ಎಲ್ಲಿ ನಿಲ್ಲಬೇಕು ಎಂದು ಹುಡುಕಾಡುವ ಈ ಪರಿಸ್ಥಿತಿಯಲ್ಲಿ ಇಂತಹ ಮಾತೆಲ್ಲ ಬೇಕಾ ಎಂದು ಆಕ್ರೋಶ ಹೊರ ಹಾಕಿದರು.
ಓದಿ; ವರುಣನ ಆರ್ಭಟಕ್ಕೆ ಹಲವೆಡೆ ಭೂಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ರೈಲು..ಪ್ರಯಾಣಿಕರ ಪರದಾಟ!