ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 209ರ ರಸ್ತೆ ಕಾಮಗಾರಿಯನ್ನು ಸಂಸದ ವಿ. ಶ್ರೀನಿವಾಸಪ್ರಸಾದ್ ಪರಿಶೀಲನೆ ನಡೆಸಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು 40ಲಕ್ಷ ಅನುದಾನ ಬಿಡುಗಡೆಯಾಗಿದೆ. ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕಿನ ಅಟ್ಟುಗೂಳೀಪುರದಿಂದ ಪುಣಜನೂರು ಮಾರ್ಗದಲ್ಲಿನ 22 ಕಿ.ಮೀ. ರಸ್ತೆ ಕಾಮಗಾರಿಗಾಗಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ತಮಿಳುನಾಡು ಮಾದರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು, ರಸ್ತೆ ಅಭಿವೃದ್ಧಿಯಿಂದ ಕೈಗಾರಿಕೋದ್ಯಮಿಗಳು, ಪ್ರವಾಸಿಗರು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು ಶೀಘ್ರವಾಗಿ ಗುಂಡಿಬಿದ್ದಿರುವ ರಸ್ತೆಗಳನ್ನು ಧೂಳು ಮೇಲೆಳದ ಮಾದರಿಯಲ್ಲಿ ಮುಚ್ಚಬೇಕು. ಆ ಮೂಲಕ ವಾಹನಗಳ ಸುಗಮ ಸಂಚಾರ ಅನುಕೂಲವಾಗಬೇಕು ಎಂದು ನಿರ್ದೇಶಿಸಿದರು.
ಈ ಹಿಂದಿನ ಸಂಸದರಾಗಿದ್ದ ಆರ್.ಧ್ರುವನಾರಾಯಣ ಕೆಡಿಪಿ ಸಭೆಗಳಲ್ಲೇ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿಳಂಭನೀತಿ ಧೋರಣೆ ವಿರುದ್ದ ಹರಿಹಾಯ್ದಿದ್ದರು. ಗುಂಡಿಬಿದ್ದ ರಸ್ತೆಗಳಲ್ಲಿ ಬಿದ್ದು ಹಲವರು ಮೃತಪಟ್ಟರೇ ಎಂಜಿನಿಯರ್ ಮತ್ತು ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹಿಂದಿನ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಗುಡುಗಿದ್ದರು. ಅದರಂತೆ, ಕೆಲವು ದಿನಗಳ ಹಿಂದೆ ಈಗಿನ ಎಸ್ ಪಿ ಎಚ್.ಡಿ.ಆನಂದಕುಮಾರ್ ಪ್ರಕರಣವನ್ನೂ ದಾಖಲಿಸಿದ್ದಾರೆ. ರಾ.ಹೆದ್ದಾರಿ ಪ್ರಾಧಿಕಾರದ ಸಮಯ ತೆಗೆದುಕೊಂಡು ತಿಂಗಳುಗಟ್ಟಲೇ ಕಾಮಗಾರಿಯನ್ನು ಮುಂದೂಡಿರುವ ನಿದರ್ಶನಗಳಿರುವಾಗ ಈ ಬಾರಿಯೂ ಸಂಸದರ 10 ದಿನದ ಡೆಡ್ ಲೈನ್ ಪಾಲನೆಯಾಗುತ್ತದೆಯೇ ಎಂಬ ಸಂದೇಹವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.