ಚಾಮರಾಜನಗರ : ಸಿದ್ದರಾಮಯ್ಯನವರೇ ತಾಕತ್ತಿದ್ದರೆ ಮೈಸೂರಿಗೆ ಬಂದು ಚುನಾವಣೆ ಎದುರಿಸಿ. ನಿಮ್ಮ ಶಕ್ತಿ ತೋರಿಸಿ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಬಹಿರಂಗ ಸವಾಲು ಹಾಕಿದರು. ನಗರದ ನಂದಿ ಭವನದಲ್ಲಿ ನಡೆದ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಬಿಜೆಪಿ, ಆರ್ಎಸ್ಎಸ್ ಅನ್ನು ತಾಲಿಬಾನಿಗೆ ಹೋಲಿಕೆ ಮಾಡುತ್ತಿದ್ದು ಅವರಿಗೆ ನಾಚಿಕೆ ಆಗಬೇಕು.
ತಾಲಿಬಾನಿಗಳೆಂದರೆ ರಕ್ತದೋಕುಳಿ ನಡೆಸಿದವರು. ಮಹಿಳೆಯರು, ಮಕ್ಕಳು, ವೃದ್ಧರೆನ್ನದೇ ಹಿಂಸಿಸುವ ಪ್ರವೃತ್ತಿಯುಳ್ಳವರು. ಇವರ ವರ್ತನೆಯನ್ನು ವಿಶ್ವವೇ ಖಂಡಿಸಿದೆ. ಅದಕ್ಕೆ ಆರ್ಎಸ್ಎಸ್ ಅನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷವಾಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದೆ. ಪಕ್ಷ ಅತ್ಯಂತ ಅಧಿಕ ಸ್ಥಾನ ಗಳಿಸಿದೆ. ತಾಪಂ, ಜಿಪಂ ಚುನಾವಣೆಗೆ ಸಜ್ಜಾಗಿದ್ದೇವೆ ಎಂದರು.
ಇದನ್ನೂ ಓದಿ: ಮಲೆನಾಡ ಹೆಬ್ಬಾಗಿಲಲ್ಲಿ ಮಹಾತ್ಮನ ಹೆಜ್ಜೆಯ ಗುರುತುಗಳು..
ನಾನು ಲೋಕಸಭಾ ಚುನಾವಣೆಗೆ ನಿಲ್ಲುವ ಆಲೋಚನೆ ಇರಲಿಲ್ಲ. ನಾನು 44 ವರ್ಷದಿಂದಲೂ ಚುನಾವಣೆಯನ್ನು ನೋಡಿದ್ದೇನೆ. ಆದ್ರೆ, ಎಂದೂ ತಲೆ ಬಾಗಿಲ್ಲ. ಪಕ್ಷೇತರವಾಗಿ ನಿಂತು ದಾಖಲೆ ಮಾಡಿದ್ದೇನೆ. ಜಿಲ್ಲೆಯ ಜನತೆಗೆ ಗೌರವ ತಂದು ಕೊಟ್ಟಿದ್ದೇನೆ. ಒಂದು ಮತದಿಂದ ಶಾಸಕದವರಿಗೆ ಎಂಪಿ ಮಾಡಿದ್ದೇನೆ ಎಂದು ಪರೋಕ್ಷವಾಗಿ ಆರ್ ಧ್ರುವನಾರಾಯಣ ವಿರುದ್ಧ ಕಿಡಿಕಾರಿದರು.