ಚಾಮರಾಜನಗರ: ಕಳೆದ ತಿಂಗಳು ಎಡಬಿಡದೇ ಸುರಿದ ಮಳೆಯಿಂದಾಗಿ ಕೈಗೆ ಬಂದ ಫಸಲು ನೀರುಪಾಲಾಗಿದ್ದ ಐದೂವರೆ ಸಾವಿರ ಮಂದಿ ರೈತರಿಗೆ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದ್ದು, ಜುಲೈ ತಿಂಗಳಿನಿಂದ ನವೆಂಬರ್ ತನಕ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 2656.82 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ 6,609 ರೈತರು ನಷ್ಟ ಅನುಭವಿಸಿದ್ದಾರೆ. ಇವರಲ್ಲಿ 5,540 ಮಂದಿ ರೈತರಿಗೆ 1.57 ಕೋಟಿ ರೂ. ನಷ್ಟು ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ನೇರ ಜಮೆ ಆಗಿದೆ ಎಂದು ತಿಳಿಸಿದರು.
ಹನೂರು ಭಾಗದಲ್ಲೇ ಹೆಚ್ಚು ಬೆಳೆಹಾನಿಗೊಳಗಾಗಿದ್ದು, 3,250 ಮಂದಿ ರೈತರು ಫಸಲು ನಷ್ಟ ಅನುಭವಿಸಿದ್ದಾರೆ. ಇದಾದ ಬಳಿಕ ಚಾಮರಾಜನಗರ ತಾಲೂಕಿನಲ್ಲಿ 2,646 ಮಂದಿ, ಗುಂಡ್ಲುಪೇಟೆಯಲ್ಲಿ 348, ಯಳಂದೂರಲ್ಲಿ 57, ಕೊಳ್ಳೇಗಾಲದಲ್ಲಿ 659 ಮಂದಿ ರೈತರು ಮಳೆಗೆ ಕೈ ಸುಟ್ಟುಕೊಂಡಿದ್ದಾರೆ ಎಂದು ಜೆಡಿ ಹೇಳಿದರು.
ಅತಿಯಾದ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಹೊಸಪುರ ಕೆರೆ ಕೋಡಿ ಬಿದ್ದು 6 ಹೆಕ್ಟೇರ್ ನಷ್ಟು ಪ್ರದೇಶದಲ್ಲಿನ ಹುರುಳಿ, ರಾಗಿ ನೀರು ಪಾಲಾಗಿತ್ತು ಅವರಿಗೂ ಬೆಳೆಹಾನಿ ಮೊತ್ತವನ್ನು ಅಂದಾಜಿಸಿ ಹಣವನ್ನು ಕೊಡಲಾಗಿದೆ ಎಂದು ವಿವರಿಸಿದರು.
ಬೆಳೆ ಪರಿಹಾರ ಸಿಕ್ಕಿಲವೆಂದು ಆರೋಪ: ಜಿಲ್ಲೆಯಲ್ಲಿ ಸಾಕಷ್ಟು ಮಂದಿ ರೈತರು ತಮಗೆ ಬೆಳೆಹಾನಿ ಪರಿಹಾರ ಸಿಕ್ಕಿಲ್ಲವೆಂದು ಆರೋಪಿಸಿದ್ದು, ಜಂಟಿ ಬೆಳೆ ಸಮೀಕ್ಷೆ ಸರಿಯಾಗಿ ನಡೆದಿಲ್ಲವೆಂದಲೂ ಕಿಡಿಕಾರಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿ ಮತ್ತೊಮ್ಮೆ ಪರಿಶೀಲಿಸಿಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ