ಚಾಮರಾಜನಗರ: ಕಾಗಲವಾಡಿ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ 60ಕ್ಕೂ ಹೆಚ್ಚು ಕೋತಿಗಳನ್ನು ಸೆರೆಹಿಡಿದು ನೀರು- ಆಹಾರ ನೀಡದೆ ಗ್ರಾಮ ಪಂಚಾಯತ್ ಸಿಬ್ಬಂದಿ ಕ್ರೌರ್ಯ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ಕೋತಿಗಳ ಉಪಟಳ ವಿಪರೀತವಾಗಿದ್ದು, ಕೆಲವು ಗ್ರಾಮಸ್ಥರು ಗ್ರಾ.ಪಂ ಸಿಬ್ಬಂದಿಗೆ ಮಂಗಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಅವುಗಳನ್ನು ಸೆರೆ ಹಿಡಿದು ಇಕ್ಕಟ್ಟಾದ ಪಂಜರದಲ್ಲಿ ಬಂಧಿಸಿ, ನೀರು, ಆಹಾರ ಕೊಡದೆ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ.
ಶನಿವಾರ ತಡರಾತ್ರಿ ಯುವಕನೋರ್ವ ಈ ಕುರಿತು ವಿಡಿಯೋ ಮಾಡಿ ಕೋತಿಗಳನ್ನು ಸೆರೆ ಹಿಡಿದು ಅವುಗಳಿಗೆ ನೀರು-ಆಹಾರವನ್ನು ನೀಡಿಲ್ಲ ಎಂದು ಆರೋಪಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ಕೋತಿಗಳನ್ನು ಬಿಆರ್ಟಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಗ್ರಾ.ಪಂ ಸಿಬ್ಬಂದಿ ಈ ಬಗ್ಗೆ ಪ್ರತಿಕ್ರಿಯಿಸಿ, ಅರಣ್ಯ ಇಲಾಖೆಯ ಅನುಮತಿ ಮೇರೆಗೆ ಕೋತಿಗಳನ್ನು ಸೆರೆ ಹಿಡಿಯಲಾಗಿದೆ ಎಂದಿದ್ದಾರೆ. ಆದರೆ ಕೋತಿಗಳನ್ನು ಸೆರೆ ಹಿಡಿದ ವಿಚಾರ ನಮಗೆ ಗೊತ್ತಿರಲಿಲ್ಲ ಎಂದು ಬಿಆರ್ಟಿಡಿಎಫ್ಒ ಸಮಜಾಯಿಷಿ ಕೊಟ್ಟಿದ್ದಾರೆ.