ಚಾಮರಾಜನಗರ : ಸಿದ್ದರಾಮಯ್ಯ ಅವರನ್ನು ಕಂಡರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮಾಡುವ ಕೆಲಸ ಅಷ್ಟಿದೆ. ಆದರೂ ಸಿದ್ದರಾಮಯ್ಯ ಅವರಿಂದಾಗಿ ಮೋದಿ ರಾಜ್ಯಕ್ಕೆ ಓಡೋಡಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರು ನೇರವಾಗಿ, ತೀಕ್ಷ್ಣವಾಗಿ ಬಿಜೆಪಿ ವಿರುದ್ಧ ಮಾತನಾಡುವುದರಿಂದ ಅವರನ್ನು ಕಂಡರೇ ಬಿಜೆಪಿ ಅವರಿಗೆ ನಡುಕ ರಾತ್ರಿನೂ ಸಿದ್ದರಾಮಯ್ಯ ಅವರ ಕನಸು. ಎದ್ದಾಗಲೂ ಸಿದ್ದರಾಮಯ್ಯ ಅವರ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಒಂದು ಕ್ಷೇತ್ರ ಇಲ್ಲವೇ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರಿಗೇ ಬಿಟ್ಟ ವಿಚಾರ. ಆದರೆ, ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೆ ಗೆಲ್ಲುತ್ತಾರೆ. ಬಾದಾಮಿ ಜನರಂತೂ ಅಲ್ಲೇ ನಿಲ್ಲಬೇಕೆಂದು ಬೆನ್ನತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹುಟ್ಟುಗುಣವೇ ಸುಳ್ಳು. ನಾವು ಕೊಟ್ಟಿದ್ದ 165 ಭರವಸೆಗಳನ್ನಷ್ಟೂ ಈಡೇರಿಸಿದ್ದೇವೆ. ಅವರ ಯೋಗ್ಯತೆಗೆ 20ರಿಂದ 30 ಈಡೇರಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳನ್ನೂ ಅವರಿಗೆ ಉಳಿಸಿಕೊಳ್ಳಲಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಬೊಮ್ಮಾಯಿಗೆ ಸವಾಲ್: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ನಾನು ಸಚಿವನಾಗಿದ್ದ ವೇಳೆ ನನ್ನ ಕಚೇರಿಯಲ್ಲಿ ಹಣ ಸಿಕ್ಕಿತು ಎಂದು ಸಿಎಂ ಹೇಳಿದ್ದಾರೆ. ಅವರೇನಾದರೂ ಬಂದು ನೋಡಿದ್ದರೇ ಎಂದು ಪ್ರಶ್ನಿಸಿದರು. ಸ್ಥಾನದ ಘನತೆ ಅರಿತು ಮಾತನಾಡಬೇಕು. ದಾಖಲಾತಿ ತರಿಸಿಕೊಂಡು ಹಣ ಸಿಕ್ಕಿತೆಂದು ಸಾಬೀತು ಪಡಿಸಲಿ ಎಂದು ಇದೇ ವೇಳೆ ಸವಾಲು ಹಾಕಿದರು.
ಬಿಜೆಪಿ ಹುಟ್ಟಿದ್ದೇ ಸುಳ್ಳಿನಲ್ಲಿ, ಸುಳ್ಳೇ ಬಿಜೆಪಿಯ ತಂದೆ ತಾಯಿ.. ಕಾಂಗ್ರೆಸ್ ಟೀಕೆ : ಬಿಜೆಪಿ ಪಕ್ಷ ಹುಟ್ಟಿದ್ದೇ ಸುಳ್ಳಿನಲ್ಲಿ, ಸುಳ್ಳೇ ಬಿಜೆಪಿಯ ತಂದೆ ತಾಯಿ, ಸುಳ್ಳೇ ಬಿಜೆಪಿಯ ಬಂಧು ಬಳಗ ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಬಿಜೆಪಿ ಪಾಪದ ಪುರಾಣ : ಸುಳ್ಳುಗಳನ್ನು ಅಧಿಕೃತಗೊಳಿಸಲು, ಸುಳ್ಳುಗಳನ್ನು ವ್ಯಾಪಕವಾಗಿ ಹಬ್ಬಿಸಲು ಸಿಟಿ ರವಿ ನೇತೃತ್ವದಲ್ಲಿ ವಾಟ್ಸಾಪ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದು ಬಿಜೆಪಿ ಪ್ರಣಾಳಿಕೆ, ಭರವಸೆ ಆಗಬಹುದು. ಬಿಜೆಪಿ ಜನತೆಗೆ ಬೆಲೆ ಏರಿಕೆಯನ್ನಲ್ಲದೆ ಬೇರೇನು ಕೊಡಬಲ್ಲದು. ಜನಾಭಿಪ್ರಾಯದಿಂದಂತೂ ಅಧಿಕಾರಕ್ಕೆ ಬರುವುದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದೇ ಆದರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಇನ್ನಷ್ಟು ಏರಿಸುವುದೇ ಬಿಜೆಪಿ ಅಜೆಂಡವಾಗಿರುತ್ತದೆ ಎಂದು ಬಿಜೆಪಿ ಪಾಪದಪುರಾಣ ಎಂಬ ಹ್ಯಾಷ್ ಟ್ಯಾಗ್ ಮೂಲಕ ವಾಗ್ದಾಳಿ ನಡೆಸಿದೆ.
ಬಿಜೆಪಿ ಭರವಸೆಗಳಲ್ಲಿ ಪ್ರಮುಖವಾದುದು ಸರ್ಕಾರಿ ಹುದ್ದೆಗಳ ಮಾರಾಟ. ಈಗಾಗಲೇ ಪ್ರತಿ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಮುಂದೆ ಅಧಿಕಾರಕ್ಕೆ ಬಂದರೆ ಬಾಕಿ ಉಳಿದ 2.5 ಲಕ್ಷ ಹುದ್ದೆಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡುವುದು ಬಿಜೆಪಿ ಯೋಜನೆಯಾಗಿರುತ್ತದೆ. ಹೆಚ್ಚಿನ ಬಿಡ್‌ಗೆ ಹರಾಜು ಕೂಡ ನಡೆಸಬಹುದು. ಬಿಜೆಪಿ ಆಡಳಿತ ಹೇಗಿದೆ ಎಂದು ನೋಡಿರುವಾಗ ಮುಂದೆ ಅವರ ಆಶ್ವಾಸನೆಗಳು ಹೇಗಿರಲಿವೆ ಎಂಬುದನ್ನು ಊಹಿಸಬಹುದು ಎಂದಿದೆ.
ಕನ್ನಡಿಗರ ಮೇಲೆ ಹಿಂದಿ ಹೇರಿಕೆಯ ನಾಗಪುರದ ಗುಪ್ತ ಅಜೆಂಡಾ ಜಾರಿಗೊಳಿಸುತ್ತಿರುವ ಬಿಜೆಪಿ ಮುಂದೆ ಹಿಂದಿಯನ್ನೇ ಕರ್ನಾಟಕದ ಅಧಿಕೃತ ಭಾಷೆ ಎಂದು ಘೋಷಿಸುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ಟೀಕಿಸಿದೆ.
ಇದೊಂದು ಭ್ರಷ್ಟ ಸರ್ಕಾರ...ಬಿ.ಕೆ ಹರಿಪ್ರಸಾದ್ : ಕೆಲವು ಎಂಎಲ್ಎಗಳು ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದರು. ಇದೊಂದು ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಹೊಸಪೇಟೆ ನಗರದಲ್ಲಿ ಕಾಂಗ್ರೆಸ್‌ನ ಪ್ರಜಾ ಪ್ರತಿಧ್ವನಿ ಬಸ್ ಯಾತ್ರೆಯಲ್ಲಿ ಮಾತನಾಡಿದ ಅವರು, ’’ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯವನ್ನು ರೋಗಗ್ರಸ್ಥವನ್ನಾಗಿ ಮಾಡಿದೆ. ನರೇಂದ್ರ ಮೋದಿ ಸುಳ್ಳಿನ ಸರದಾರ. ಎಪ್ಪತ್ತು ವರ್ಷ ಕಾಂಗ್ರೆಸ್ ಏನು ಮಾಡಿಲ್ಲ ಎನ್ನುವ ಮೋದಿ ಸುಳ್ಳಿನ ಸರದಾರ ಆಗಿದ್ದಾರೆ. 2018ರಲ್ಲಿ ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದರು. ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆದರೆ, ಕೆಲವರು ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಪ್ರತಿಯೊಂದು ಪ್ರಕರಣಕ್ಕೂ ‘ಬಿ’ ರಿಪೋರ್ಟ್ ಹಾಕುತ್ತಿದೆ. ಇದು ‘ಬಿ’ ರಿಪೋರ್ಟ್ ಸರ್ಕಾರ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಬಿ ರಿಪೋರ್ಟ್ ಹಾಕಿದ ಎಲ್ಲಾ ಕೇಸ್‌ಗಳ ಮರು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : ರಾಜ್ಯದ 40 ಪರ್ಸೆಂಟ್ ಕಮಿಷನ್ ಬಗ್ಗೆ ಮೋದಿ ಮಾತನಾಡಬೇಕು: ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಆಗ್ರಹ