ಚಾಮರಾಜನಗರ : ಕೊರೊನಾ ಮಹಾಮಾರಿಯಿಂದ ಸಿಟಿ ಮಕ್ಕಳಿಗೆ ಮನೆಯಲ್ಲೇ ಪಾಠ ನಡೆದ್ರೆ ಹಳ್ಳಿಗಾಡಿನ ಮಕ್ಕಳಿಗೆ ಶಾಲೆಗಿಂತ ಆನ್‌ಲೈನ್ ತರಗತಿಗಳೇ ದೂರವಾಗಿರುವ ಅಯೋಮಯ ಸ್ಥಿತಿ ಹನೂರು ತಾಲೂಕಿನ ಕಾಡಂಚಿನ ಗೋಪಿನಾಥಂ ಗ್ರಾಮದಲ್ಲಿ ಏರ್ಪಟ್ಟಿದೆ.
ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ತರಗತಿಗಳಿಗೆ, ವರ್ಕ್‌ಫ್ರಂ ಹೋಂ ಮಾಡುವ ಉದ್ಯೋಗಿಗಳು ಪ್ರತಿದಿನವೂ 12 ಕಿ.ಮೀ ದೂರಕ್ಕೆ ತೆರಳಿ ಪಾಠ, ನೌಕರಿ ಮಾಡಬೇಕಿದ್ದು ಸಂಜೆ ಪ್ರಾಣಿಗಳ ಭಯದಿಂದಲೇ ಮನೆಗೆ ಹಿಂತಿರುಗಬೇಕಿದೆ.
ಬಿಎಸ್ಎನ್ಎಲ್ ಇದ್ದರೂ ಇಲ್ಲದಿರುವ ಸ್ಥಿತಿ : ಗೋಪಿನಾಥಂ ಸೇರಿದಂತೆ ಪುದೂರು, ಆತೂರು, ಕೋಟೆಯೂರು, ಜಂಬೂಟ್ ಪಟ್ಟಿ ಗ್ರಾಮದ ಸಾವಿರಾರು ಕುಟುಂಬಗಳು ಇಲ್ಲಿರುವ ಬಿಎಸ್ಎನ್ಎಲ್ ನೆಟ್ವರ್ಕ್ ಅವಲಂಬಿಸಿವೆ. 4ಜಿ ಯುಗದಲ್ಲಿ ಗಂಟೆಗೆ 6 ಬಾರಿ ಕೈಕೊಡುವ 2ಜಿ ನೆಟ್ವರ್ಕ್ನ ಅವಲಂಬಿಸಿದ್ದಾರೆ.
ಬೇಸಿಕ್ ಫೋನ್ಗಳಿಗೂ ಸರಿಯಾಗಿ ನೆಟ್ವರ್ಕ್ ಸಿಗದಷ್ಟು ಕಳಪೆಯ ತರಂಗಾಂತರ ಇಲ್ಲಿದ್ದು, ಗಾಳಿ-ಮಳೆಗೆ ವಿದ್ಯುತ್ ಕೈ ಕೊಡುವುದರಿಂದ ನೆಟ್ವರ್ಕ್ ಬಂದ್ ಆಗುತ್ತೆ. ಆ್ಯಂಡ್ರಾಯ್ಡ್ ಫೋನ್‌ಗಳಿಗೆ ನೆಟ್ವರ್ಕ್ ಕನೆಕ್ಟ್ ಆಗದಿರುವುದರಿಂದ ಆನ್‌ಲೈನ್ ತರಗತಿಗೆ, ವರ್ಕ್ ಫ್ರಂ ಉದ್ಯೋಗಿಗಳು ತಮಿಳುನಾಡಿನ ಜಿಯೋ ನೆಟ್ವರ್ಕ್ ಸಿಗಲಿರುವ 12 ಕಿ.ಮೀ ದೂರದ ಹೊಗೆನಕಲ್ ಜಲಪಾತ ಇಲ್ಲವೇ ಜಾಕ್ವೆಲ್ ಸಮೀಪ ತೆರಳಬೇಕಾಗುತ್ತೆ.
ಬೈಕ್ ಇದ್ದವರ ಬಳಿ ಅಂಗಲಾಚಿ ಇಲ್ಲಿನ ವಿದ್ಯಾರ್ಥಿಗಳು ತೆರಳಿ ಪಾಠ - ಪ್ರವಚನ ಕೇಳುತ್ತಿದ್ದಾರೆ. ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಹಲವು ಗ್ರಾಮಗಳಲ್ಲಿ ಇದೆ. ಇದರೊಂದಿಗೆ ಹಲವು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿಲ್ಲ.
12 ಕಿ.ಮೀ ದೂರದ ಕಾಡಿಗೆ ಹೋಗಬೇಕಾದ್ದರಿಂದ ವಿದ್ಯಾರ್ಥಿನಿಯರು ಆನ್‌ಲೈನ್ ತರಗತಿಗೆ ಹಾಜರಾಗುತ್ತಿಲ್ಲ. ಸ್ವಾತಂತ್ರ್ಯ ಬಂದು 7 ದಶಕ ಕಳೆದ್ರೂ ಈ ಗ್ರಾಮಗಳಿಗೆ ಇನ್ನೂ ಕೂಡ ಸರಿಯಾಗಿ ಮೊಬೈಲ್ ನೆಟ್ವರ್ಕ್ ಇಲ್ಲದಿರುವುದು ಡಿಜಿಟಲ್ ಇಂಡಿಯಾದ ಅಣಕದಂತೆ ಭಾಸವಾಗುತ್ತಿದೆ.