ಚಾಮರಾಜನಗರ: ಎಂಎಲ್ಸಿ ಸಿ ಪಿ ಯೋಗೇಶ್ವರ್ ಭಾವ ಮಹಾದೇವಯ್ಯ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದೆ. ಹನೂರು ತಾಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕಾರು ಪತ್ತೆಯಾಗಿದೆ. ಕಾರಿದ್ದ ಸ್ಥಳದ ಮುಂಭಾಗದ ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮೂವರು ಮುಸುಕುಧಾರಿಗಳು ಕಾರಿನಿಂದ ಇಳಿದು ಹೋಗುವುತ್ತಿರುವ ದೃಶ್ಯ ಸೆರೆಯಾಗಿತ್ತು. ಕಾರಿನಲ್ಲಿದ್ದ ರಕ್ತದ ಕಲೆಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಕೊಳ್ಳೇಗಾಲದ ಡಿವೈಎಸ್ಪಿ ಹಾಗೂ ರಾಮನಗರ ಪೊಲೀಸರು ಜಂಟಿಯಾಗಿ ನಾಲ್ ರೋಡ್ ಸುತ್ತಮುತ್ತಲು ಮಹದೇವಯ್ಯ ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಮತ್ತೊಂದೆಡೆ, ರಾಮಾಪುರದಲ್ಲೇ ಸಿ ಪಿ ಯೋಗೇಶ್ವರ್ ಮೊಕ್ಕಾಂ ಹೂಡಿದ್ದಾರೆ.
ಡಿಸೆಂಬರ್ 2ರಂದು ಯೋಗೇಶ್ವರ್ ಬಾಮೈದುನ ಮಹದೇವಯ್ಯ ನಾಪತ್ತೆ ಆಗಿದ್ದಾರೆ. ಅವರು ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದ ಮಹದೇವಯ್ಯ ಏಕಾಏಕಿ ನಾಪತ್ತೆಯಾಗಿದ್ದಾರೆ. ಮಹದೇವಯ್ಯ ಮನೆಯ ಕೋಣೆಯಲ್ಲಿನ ಬೀರು ಬಾಗಿಲುಗಳು ತೆರೆದ ಸ್ಥಿತಿಯಲ್ಲಿ ಕಂಡುಬಂದಿತ್ತಲ್ಲದೆ, ಮಹದೇಶ್ವರ ಬೆಟ್ಟದಲ್ಲಿ ಅವರ ಮೊಬೈಲ್ ಲೋಕೇಶನ್ ಪತ್ತೆಯಾಗಿತ್ತು. ಮಹದೇವಯ್ಯ ಕಾಣೆಯಾಗಿರುವ ಬಗ್ಗೆ ಚನ್ನಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಸಿ.ಪಿ.ಯೋಗೇಶ್ವರ್ ಭಾವ ನಾಪತ್ತೆ ಕೇಸ್: ಹನೂರಿನ ರಾಮಪುರದಲ್ಲಿ ಕಾರು ಪತ್ತೆ