ಚಾಮರಾಜನಗರ: ಜನಪ್ರತಿನಿಧಿಗಳಾದವರಿಗೆ ಪಕ್ಷ ನಿಷ್ಠೆ ಇರಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಅತೃಪ್ತ ಶಾಸಕರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ಹನೂರಿನಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬಹಳ ನೋವು ತಂದಿದೆ. ಮೊದಲ ಬಾರಿ ಗೆದ್ದ ಶಾಸಕರೇ ಸಚಿವ ಸ್ಥಾನಕ್ಕಾಗಿ, ಇನ್ನಿತರೆ ಅಧಿಕಾರಕ್ಕಾಗಿ ಹಪಾಹಪಿಸುವುದು ಸರಿಯಲ್ಲ ಎಂದು ಅತೃಪ್ತರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಉರುಳುವುದು ಮತ್ತು ಉಳಿಯುವುದು ಸ್ಪೀಕರ್ ಮೇಲೆ ನಿಂತಿದೆ. ರಾಜೀನಾಮೆ ಇನ್ನೂ ಅಂಗೀಕಾರವಾಗದಿದ್ದರಿಂದ ಈಗಲೇ ಏನು ಹೇಳಲಾಗುವುದಿಲ್ಲ. ರಾಜೀನಾಮೆ ಕೊಟ್ಟಿರುವವರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಮಾತುಕತೆಯಲ್ಲಿದ್ದಾರೆ ಎಂದರು.
ಇದೇ ವೇಳೆ, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಈ ಕುರಿತು ಅವರೇ ನಿನ್ನೆ ಸ್ಪಷ್ಟನೆ ನೀಡಿದ್ದಾರೆ ಎಂದು ಧ್ರುವನಾರಾಯಣ ತಿಳಿಸಿದರು.