ಚಾಮರಾಜನಗರ: ತಮಿಳುನಾಡು ಹಾಗೂ ಕರ್ನಾಟಕದ ಶಾಸಕರು ಗಡಿಯಲ್ಲಿ ರೌಂಡ್ಸ್ ಹಾಕಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ತಮಿಳುನಾಡಿನ ಹಂದಿಯೂರು ಶಾಸಕ ಎ.ಜೆ.ವೆಂಕಟಾಚಲಂ ಅವರು ನಾಲ್ ರೋಡ್‌ನಲ್ಲಿ ಎರಡೂ ರಾಜ್ಯದ ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ರಸ್ತೆ ನಿರ್ಮಾಣ ಸಂಬಂಧ ಜಂಟಿ ಸರ್ವೆ ನಡೆಸುವ ನಿರ್ಣಯ ತೆಗೆದುಕೊಂಡಿದ್ದಾರೆ.
ಗಡಿ ರಸ್ತೆಗಳ ಕಥೆ-ವ್ಯಥೆ: ಹನೂರು ತಾಲೂಕು ತಮಿಳುನಾಡಿನ ಗಡಿ ಹಂಚಿಕೊಂಡಿದ್ದು ಕರ್ನಾಟಕಕ್ಕಿಂತ ತಮಿಳುನಾಡಿನ ಪ್ರದೇಶಗಳೊಂದಿಗೆ ಇವರ ವ್ಯಾಪಾರ-ಆರೋಗ್ಯ ಸಂಬಂಧಗಳಿವೆ. ಹನೂರಿನ ಹೂಗ್ಯಂ ಪಂಚಾಯಿತಿಗೆ ಒಳಪಡುವ ಜಲ್ಪಿಪಾಳ್ಯಂ ಗ್ರಾಮದ ನಡುವೆ ಹಳ್ಳ ಹಾದುಹೋಗಿದ್ದು, ಆಳೆತ್ತರದ ನೀರಲ್ಲಿ ಜನರು ಹಗ್ಗ ಹಿಡಿದೇ ಸಾಗಬೇಕು.
ಇದನ್ನೂ ಓದಿ: ಗುಂಡಿಗಳಿಂದ ಕೂಡಿದ ರಸ್ತೆಗಳು : ಬಸ್ ಸಂಚಾರದಲ್ಲಿ ವ್ಯತ್ಯಯ, ವಿದ್ಯಾರ್ಥಿಗಳ ಪರದಾಟ
ತಮಿಳುನಾಡಿಗೆ ಸೇರಿದ ಗುಡ್ಡೆಯೂರು, ಮಡಿತರೈ ಮಾಕನಪಾಳ್ಯ ಸೇರಿದಂತೆ ಏಳು ಗ್ರಾಮಗಳು ರಾಜ್ಯದ ಜಲ್ಲಿಪಾಳ್ಯ, ಹೂಗ್ಯಂ ಮತ್ತು ತಮಿಳುನಾಡಿನ ಮುಖ್ಯರಸ್ತೆಗೆ ಹತ್ತಿರವಾಗಿದ್ದರೂ ಸಮರ್ಪಕ ರಸ್ತೆಯಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 3 ಕಿ.ಮೀ ರಸ್ತೆಗೆ ಅನುಮತಿ ನೀಡಿದರೆ ತಮಿಳುನಾಡಿಗೆ 2.5 ಕಿ.ಮೀ. ಹತ್ತಿರದ ಮುಖ್ಯರಸ್ತೆ ತಲುಪಬಹುದು. ಹಾಗೆಯೇ, ಹನೂರು ಕ್ಷೇತ್ರದ ಹೂಗ್ಯಂ ಪಂಚಾಯಿತಿಗೆ ಹತ್ತಿರ ಆಗಲಿದೆ. ಆಸ್ಪತ್ರೆಗಳಿಗೆ, ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆಗೆ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಎರಡು ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಲು ಒಪ್ಪಿದ್ದು, ರಸ್ತೆ ನಿರ್ಮಾಣದ ಕನಸು ಮತ್ತೆ ಚಿಗುರಿದೆ.
ಇದನ್ನೂ ಓದಿ: 'ಈಟಿವಿ ಭಾರತ'ದ ಜನಪರ ಕಾಳಜಿಗೆ ಅಧಿಕಾರಿಗಳ ಸ್ಪಂದನೆ.. ಕಡಬ-ಪಂಜ ರಸ್ತೆ ಸಮಸ್ಯೆ ಬಗೆಹರಿಸುವ ಭರವಸೆ