ಕೊಳ್ಳೇಗಾಲ(ಚಾಮರಾಜನಗರ): ತಾಲೂಕಿನ ಪಾಳ್ಯ ಗ್ರಾಮದಲ್ಲಿ ಈಚೆಗೆ ಕೆರೆ ಒಡೆದು ಅನಾಹುತ ಉಂಟಾಗಿತ್ತು. ಇದನ್ನು ವೀಕ್ಷಿಸಲು ಸ್ಥಳಕ್ಕೆ ಭೇಟಿ ನೀಡಿದ ಹನೂರು ಶಾಸಕ ನರೇಂದ್ರ ಅವರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯಕರ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 13 ವರ್ಷಗಳಿಂದ ಶಾಸಕರಾಗಿ ಹನೂರು ಭಾಗದ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಲು ವಿಫಲರಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದಲ್ಲಿ ನಿಮ್ಮ ಸಾಧನೆ ಅಥವಾ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಬಹುದಿತ್ತು. ಆದರೆ, ಆ ಕೆಲಸ ಮಾಡಲಿಲ್ಲ, ಸುಮ್ಮನೆ ಶಾಸಕರಾಗಿದ್ದೀರಿ. ಎಂಎಲ್ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೇ? ನೀವು ರಾಜೀನಾಮೆ ಕೊಡಿ ಎಂದು ಜೆಡಿಎಸ್ ಮುಖಂಡ ಮಂಜೇಶ್ ಗೌಡ ವ್ಯಂಗ್ಯವಾಡಿದರು. ಇದಕ್ಕೆ ಶಾಸಕ ಕೋಪದಲ್ಲಿ ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದ್ದಾರೆ.