ಚಾಮರಾಜನಗರ: ಬಿಜೆಪಿ ಸಚಿವರಿಗೆ ತಲೆ ನೆಟ್ಟಗಿಲ್ಲ, ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಕಿಡಿಕಾರಿದರು.
ಚಾಮರಾಜನಗರ ಜಿಲ್ಲೆಯ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆಯ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಕುರಿತಂತೆ ಗೃಹ ಸಚಿವರು ಒಂದು ರೀತಿ ಹೇಳಿಕೆ ಕೊಡುತ್ತಾರೆ. ಆಹಾರ ಸಚಿವ ಉಮೇಶ್ ಕತ್ತಿ 5 ಕೆಜಿ ಅಕ್ಕಿ ಸಾಕು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಬಿಜೆಪಿ ಸಚಿವರುಗಳಿಗೆ ತಲೆ ನೆಟ್ಟಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಸಚಿವರು ಬಾಡಿಗೆ ಸಿಪಾಯಿಗಳಿದ್ದಂತೆ'.. ಜಿಲ್ಲೆಗೆ ಸಿಎಂ ಬಾರದಿದ್ದಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಗರಂ
5 ಕೆ.ಜಿ ಅಕ್ಕಿ ಸಾಕು ಎಂದು ಹೇಳಿದ್ದಾರಲ್ಲ?, ದಿನಕ್ಕೆ 250 ಗ್ರಾಂ ಅಕ್ಕಿ ಸಾಕಾ? ಶ್ರೀಮಂತಿಕೆ ತೊಟ್ಟಿಲಲ್ಲಿ ಬೆಳೆದವರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ಕನಿಷ್ಠ 10 ಕೆ.ಜಿ ಅಕ್ಕಿ ಕೊಡಬೇಕು. ಆದರೆ 5 ಕೆ.ಜಿ ಸಾಕು ಅಂತಾರೆ. ಅವರ ಮಾತು ಒಪ್ಪಲು ಸಾಧ್ಯವಿಲ್ಲ, ಅವರ ಹೇಳಿಕೆ ವಿಪರ್ಯಾಸ ಎಂದು ಅಸಮಾಧಾನ ಹೊರಹಾಕಿದರು. ಜನರು ಮಾತನಾಡುತ್ತಿಲ್ಲ, ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜನರು ರೊಚ್ಚಿಗೆದ್ದರೆ ಸುಮ್ಮನಾಗುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು,.