ಕೊಳ್ಳೇಗಾಲ: ನಿನ್ನೆ ಸುರಿದ ಭಾರೀ ಮಳೆಗೆ ಪ್ರವಾಹದ ಆತಂಕ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದ ಮತ್ತು ಜಮೀನುಗಳು ಜಲಾವೃತವಾಗಿದ್ದ ತಾಲೂಕಿನ ಮುಳ್ಳೂರು, ಹಳೇ ಅಣಗಳ್ಳಿ, ದಾಸನಪುರ, ಹಳೇ ಹಂಪಾಪುರ ಗ್ರಾಮಗಳಿಗೆ ಶಾಸಕ ಎನ್.ಮಹೇಶ್ ಅವರು ಭೇಡಿ ನೀಡಿ ಪರಿಶೀಲನೆ ನಡೆಸಿದರು.
ತಗ್ಗು ಪ್ರದೇಶದಲ್ಲಿರುವ ಜಮೀನುಗಳು ನೀರಿನಿಂದ ಆವೃತವಾಗಿ ಅಪಾರ ಹಾನಿಯಾಗಿದೆ. ಎಷ್ಟು ಎಕರೆ ಜಮೀನು ನೀರಿಗೆ ಆಹುತಿಯಾಗಿದೆ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಬಗ್ಗೆ ಮಾತನಾಡಿದ ಅವರು, ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳಿಂದ ಅಧಿಕ ನೀರನ್ನು ಹೊರ ಬಿಟ್ಟ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ ಎಂದರು.
ಪ್ರವಾಹ ಭೀತಿಯ ಪೂರ್ವದಲ್ಲೆ ವಾಸ್ತವತೆ ಸರ್ವೇ ಮಾಡಲಾಗಿದೆ. ಒಂದು ವೇಳೆ ಪ್ರವಾಹ ಬಂದರೆ ಕೃಷಿ ಇಲಾಖೆಗೆ ಸೇರಿದ 221 ಹೆಕ್ಟೇರ್, ತೋಟಗಾರಿಕೆಗೆ ಸೇರಿದ 21.65 ಹೆಕ್ಟೇರ್ಗೆ ನೀರು ತುಂಬುವ ಸಾಧ್ಯತೆ ಇದೆ. ಇವತ್ತೂ 45 ಸಾವಿರ ಕ್ಯೂಸೆಕ್ ನೀರನ್ನು ನೀರನ್ನು ಬಿಡಲಾಗಿದೆ. ಇದರಿಂದ ಪ್ರವಾಹದ ಆತಂಕ ಕಡಿಮೆ ಇದೆ ಎಂದರು.
ಒಂದು ವೇಳೆ ಪ್ರವಾಹ ಉಂಟಾದರೂ ಅದನ್ನು ನಿಭಾಯಿಸಲು ಇಲ್ಲಿನ ಅಧಿಕಾರಿ ವರ್ಗ ಸನ್ನದ್ಧವಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ಸೇರಿಸುವುದಕ್ಕೆ ತಿಮ್ಮರಾಜೀಪುರದ ಮೊರಾರ್ಜಿ ವಸತಿ ಶಾಲೆಯನ್ನು ಗುರುತಿಸಲಾಗಿದೆ. ಜಾನುವಾರುಗಳ ರಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಗಾಬರಿಯಾಗುವುದು ಬೇಡ ಎಂದು ಹೇಳಿದ್ದಾರೆ.