ಕೊಳ್ಳೇಗಾಲ : ತಾಲೂಕಿನಾದ್ಯಂತ ಮೈಕ್ರೋ ಫೈನಾನ್ಸ್ ನಡೆಸುವ ಐದು ಕಂಪನಿಗಳು ಬಡವರಿಗೆ ಕೊಟ್ಟಿರುವ ಸಾಲವನ್ನು ಮರುಪಾವತಿ ಮಾಡುವಂತೆ ಧಮ್ಕಿ ಹಾಕುತ್ತಿವೆ ಎಂಬ ದೂರು ಇಲ್ಲಿನ ಸ್ಥಳೀಯ ಮಹಿಳೆಯರಿಂದ ನನಗೆ ಬಂದಿದೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಸಾಲವಸೂಲಾತಿಗೆ ಒತ್ತಾಯ ಮಾಡಬಾರದು ಎಂಬ ಸರ್ಕಾರದ ನಿರ್ದೇಶನವಿದ್ದರೂ ಸಹ ಖಾಸಗಿ ಸಾಲ ನೀಡುವ ಕಂಪನಿಗಳು ಜನರನ್ನು ಪೀಡಿಸುತ್ತಿವೆ. ಕಟ್ಟದಿದ್ದರೆ ಅಧಿಕ ಬಡ್ಡಿ ಹಾಕಲಾಗುತ್ತದೆ ಎಂದು ಭಯಪಡಿಸುತ್ತಿವೆ ಎಂದು ತಿಳಿದು ಬಂದಿದೆ. ಭಾರತ್ ಫೈನಾನ್ಸ್, ಸೂರ್ಯೋದಯ, ಗ್ರಾಮೀಣ ಕೂಟ, ಗ್ರಾಮ ಶಕ್ತಿ, ಷೇರ್ ಫೈನಾನ್ಸ್‌ನಂತಹ ಕೆಲವು ಖಾಸಗಿ ಫೈನಾನ್ಸ್ ಕಂಪನಿಗಳು ಕೊರೊನಾ ಸಂಕಷ್ಟದಲ್ಲೂ ಸಾಲ ಪಡೆದಿರುವ ಬಡ ಜನರಿಗೆ ಹಣ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಇದ್ದರೂ ಬಲವಂತವಾಗಿ ಸಾಲ ವಸೂಲಾತಿಗೆ ಇಳಿದಿರುವುದು ಸರಿಯಲ್ಲ. ಈ ಪ್ರವೃತ್ತಿ ಹೀಗೆ ಮುಂದುವರೆದರೆ ಮೂಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಲದ ನೆಪದಲ್ಲಿ ಅಧಿಕ ಬಡ್ಡಿ ಹಾಕಬಾರದು. ಕೊರೊನಾ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮಿಂದ ಸಾಲ ಪಡೆದವರೆಲ್ಲರೂ ಆಟೋಚಾಲಕರು, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರಾಗಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ ಧಮ್ಕಿ ಮೂಲಕ ಸಾಲ ವಸೂಲಾತಿಗಾಗಿ ಮಹಿಳೆಯರಿಗೆ ಕಿರುಕುಳ ಕೊಡುತ್ತಿರುವ ಇಂತಹ ಖಾಸಗಿ ಸಾಲ ಸಂಸ್ಥೆಗಳ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದ್ದಾರೆ.
ಇದೇ ಸಮಯದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ ಅವರಿಗೆ ಬಡ ಜನರಿಗೆ ಸಾಲ ಕಟ್ಟಲು ಪೀಡಿಸುವ ಫೈನಾನ್ಸ್ ಕಂಪನಿಗಳ ಮೇಲೆ ಎಫ್ಐಆರ್ ಹಾಕುವಂತೆ ಸೂಚನೆ ನೀಡಿದ್ದಾರೆ.