ಕೊಳ್ಳೇಗಾಲ: ಕೊರೊನಾ ಕರ್ಫ್ಯೂ ಸಮಯದಲ್ಲಿ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಆದ್ದರಿಂದ ನರೇಗಾದಲ್ಲಿ ಕೂಲಿ ಹಣವಾಗಿ ಸಿಗುವ 289 ರೂ.ಗಳನ್ನು 500ಕ್ಕೆ ಹೆಚ್ಚಿಸಿ ಎಂದು ಸರ್ಕಾರಕ್ಕೆ ಶಾಸಕ ಎನ್.ಮಹೇಶ್ ಒತ್ತಾಯ ಮಾಡಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಕೊಳ್ಳೇಗಾಲ ತಾಲೂಕಿಗೆ 7 ಪಂಚಾಯಿತಿ ಸೇರಿದ್ದು, ಸದ್ಯ 8 ಕೆರೆಗಳ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಇಲ್ಲಿ 2245 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಯಳಂದೂರಿನ 12 ಗ್ರಾಮ ಪಂಚಾಯಿತಿಯಲ್ಲಿ 57 ಕಡೆ ನರೇಗಾ ಕಾಮಗಾರಿ ನಡೆಯುತ್ತಿದೆ. ಸಂತೆಮರಳ್ಳಿಯಲ್ಲಿ 11 ಗ್ರಾಪಂನಲ್ಲಿ 16 ಕಡೆ ಕಾಮಗಾರಿಗಳು ನಡೆಯುತ್ತಿವೆ. ಒಟ್ಟಾರೆ ವಿಧಾನಸಭಾ ಕ್ಷೇತ್ರದಾದ್ಯಂತ 3845 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರತೀ ದಿನ ಪ್ರತಿಯೊಬ್ಬರಿಗೂ 289 ರೂ. ಮಾತ್ರ ಕೂಲಿ ನೀಡಲಾಗುತ್ತಿದೆ. ಇದರಿಂದ ನರೇಗಾ ಕೆಲಸಕ್ಕೆ ಬಹುತೇಕ ಸಂಖ್ಯೆಯಲ್ಲಿ ಪುರುಷರು ಬರುತ್ತಿಲ್ಲ. ಮಹಿಳೆಯರು ಮಾತ್ರ ಬರುತ್ತಿದ್ದಾರೆ. ಕೂಲಿ ಕೆಲಸಕ್ಕೆ ಬರುವರೆಲ್ಲ ಬಡವರೇ ಆಗಿದ್ದಾರೆ. ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಇದರ ಜೊತೆಗೆ ಕೊರೊನಾ ಸಮಯದಲ್ಲಿ ಖಾತೆಗಳಿಗೆ ಹಣ ಹಾಕಿ ಎಂಬ ಒತ್ತಾಯವು ಸರ್ಕಾರದ ಮುಂದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 25 ಸಾವಿರ ಹಣವನ್ನು ಬಡವರ ಖಾತೆಗೆ ಹಾಕಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ. ಆದರೆ ಈ ಸಂದಿಗ್ಧತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚಿಸಿ ನರೇಗಾದಲ್ಲಿ ನೀಡಲಾಗುತ್ತಿರುವ ಕನಿಷ್ಠ 289 ರೂ. ಕೂಲಿ ಹಣವನ್ನು 500ಕ್ಕೆ ಹೆಚ್ಚಿಸಲಿ. ಬಡ ಜನರಿಗೆ ಇದು ಅನುಕೂಲವಾಗುತ್ತದೆ ಎಂದರು.
ಸರ್ಕಾರಗಳಿಗೆ ಈ ಹಣ ದೊಡ್ಡದೇನಲ್ಲ. ಈ ಸಂದರ್ಭದಲ್ಲಿ ಇದರ ಅಗತ್ಯವಿದೆ. ಕೊರೊನಾ ಸಮಯದಲ್ಲಿ ಕೆಲಸ ಕಾರ್ಯವಿಲ್ಲದೆ ಉದ್ಯೋಗದ ಅಭಾವ ಹೆಚ್ಚಿದೆ. ಆದ್ದರಿಂದ ಸರ್ಕಾರಗಳು 500 ರೂ. ಕೂಲಿ ಹಣ ನೀಡಬೇಕು. ಕೋವಿಡ್ ಮುಗಿದ ಬಳಿಕ ಬೇಕಾದರೆ ಪಾಲಿಸಿ ಬದಲಾಯಿಸಿಕೊಳ್ಳಲಿ. ಏಕೆಂದರೆ ಜನರು ಬೇರೆ ಬೇರೆ ಕೆಲಸಕ್ಕೆ ಹೋಗುತ್ತಾರೆ. ಈ ಸಮಯದಲ್ಲಿ ಕೂಲಿ ಹೆಚ್ಚು ನೀಡುವುದು ಸೂಕ್ತ ಎಂದು ಎನ್.ಮಹೇಶ್ ಒತ್ತಾಯಿಸಿದ್ದಾರೆ.
ಕಳೆದ ಬಾರಿಯ ಕೂಲಿ ಹಣ ಸಿಕ್ಕಿಲ್ಲ: ಟಗರಪುರ ಗ್ರಾಪಂ ವ್ಯಾಪ್ತಿಯ ಸಿಲ್ಕಲ್ ಪುರ, ಕುಣಗಳ್ಳಿ ಗ್ರಾಪಂ ವ್ಯಾಪ್ತಿಯ ಉತ್ತಂಬಳ್ಳಿ ಹಾಗೂ ಹರಳೆ ಗ್ರಾಪಂ ವ್ಯಾಪ್ತಿಯ ಹಳೇ ಹಂಪಾಪುರ ಕೆರೆಗಳಲ್ಲಿ ಕೆಲಸ ಮಾಡುತ್ತಿರುವ ನರೇಗಾ ಕೂಲಿ ಕಾರ್ಮಿಕರಲ್ಲಿ ಕೆಲವರಿಗೆ ಕಳೆದ ಬಾರಿಯ ಕೂಲಿ ಹಣ ಸಿಕ್ಕಿಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ. ಮಾಸ್ಕ್, ಸಾನಿಟೈಸರ್ ಬಳಸಿ ಎನ್ನುತ್ತೀರಿ. ನಮಗೆ ಯಾರೂ ಕೊಟ್ಟಿಲ್ಲ ಎಂದು ದೂರಿದರು. ಈ ವೇಳೆ ಕೋಪಗೊಂಡ ಅವರು, ಯಾಕೆ ಕೊಟ್ಟಿಲ್ಲ. ತರ್ಸಿಲ್ವ ಎಂದು ಪಿಡಿಒಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.