ಚಾಮರಾಜನಗರ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ದಲಿತ ನಾಯಕನಾಗುವ ಉತ್ಸಾಹದಲ್ಲಿ ಶಾಸಕ ಎನ್. ಮಹೇಶ್ ಇದ್ದು, ತಮ್ಮನ್ನು ಬೆಂಬಲಿಸುವ ನೂರಾರು ಮಂದಿಯನ್ನು ಕಮಲ ಪಾಳೆಯಕ್ಕೆ ಸೇರಿಸುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಈಗಲೂ ಸಂಸದ ವಿ. ಶ್ರೀನಿವಾಸ ಪ್ರಸಾದ್ ದಲಿತ ನಾಯಕರಾಗಿದ್ದು, ಇದೇ ತಮ್ಮ ಕೊನೆಯ ರಾಜಕೀಯ ಎಂದು ಘೋಷಿಸಿರುವುದರಿಂದ ಪ್ರಸಾದ್ ನಂತರ ಮಹೇಶ್ ಅವರಿಗೆ ದಲಿತ ನಾಯಕರಾಗಿ ಬೆಳೆಯಲು ಸಾಕಷ್ಟು ಅವಕಾಶವಿದೆ. ಹೈಕಮಾಂಡ್ ಕೂಡ ಇವರನ್ನು ಹೆಚ್ಚು ಬಿಂಬಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮಹೇಶ್ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡುತ್ತಿದ್ದು, ಈಗಾಗಲೇ ಮೈಸೂರು, ಹಾಸನ, ಚಾಮರಾಜನಗರದಲ್ಲಿ ಬೃಹತ್ ಮಟ್ಟದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದಾರೆ. ಯಡಿಯೂರಪ್ಪ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದು, ಶೀಘ್ರದಲ್ಲೇ ಸಂಪುಟಕ್ಕೂ ಸೇರ್ಪಡೆಯಾಗುತ್ತಾರೆಂಬ ಮಾತುಗಳು ಕೇಳಿಬಂದಿದೆ. ಸಂಘ ಪರಿವಾರಕ್ಕೆ ಎನ್.ಮಹೇಶ್‌ರಂತಹ ವಾಗ್ಮಿಯನ್ನು ಬೆಳೆಸಬೇಕಾದದ್ದು ಅನಿವಾರ್ಯವಾಗಿದ್ದು ದಲಿತ ನಾಯಕನಾಗಲುಲು ಮಹೇಶ್ ಅವರಿಗೆ ಅವಕಾಶ, ಉತ್ಸಾಹ ಎರಡೂ ಇದೆ.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಧಾರವಾಡ ವಿವಿ ಹಿರಿಯ ಪ್ರಾಧ್ಯಾಪಕ ಪೊಲೀಸ್ ವಶಕ್ಕೆ
ಎನ್.ಮಹೇಶ್ ಪ್ರತಿಕ್ರಿಯಿಸಿ, ಯಾವುದೇ ಷರತ್ತು ಹಾಕದೇ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅವರು ನನ್ನನ್ನು ಬಳಸಿಕೊಳ್ಳಲಿ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನಲ್ಲ. ಯಾರು ಸಕ್ರಿಯರಾಗಿ ಪಕ್ಷದ ಕೆಲಸ ಮಾಡುತ್ತಾರೋ, ಪಕ್ಷ ಸಂಘಟಿಸುತ್ತಾರೋ ಅವರನ್ನು ಪಕ್ಷ ಪ್ರಮೋಟ್ ಮಾಡಲಿದೆ. ದಲಿತ ನಾಯಕತ್ವ ಎಂದು ಕೇಳಿ ಪಡೆಯುವುದಲ್ಲ, ಕೆಲಸ ಮಾಡುತ್ತಾ ಮಾಡುತ್ತಾ ತಾನಾಗೇ ಬರುವುದು. ಶ್ರೀನಿವಾಸ ಪ್ರಸಾದ್ ಅವರು ಯಾರಿಗಾದರೂ ಬೆನ್ನು ತಟ್ಟಬೇಕಿದ್ದರೆ ಅದು ತನಗೇ ತಟ್ಟಬೇಕು ಎಂದು ಹೇಳಿದರು.