ಚಾಮರಾಜನಗರ: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ದಲಿತರಿಗೆ ಅಧಿಕಾರ ಇಲ್ಲ ಎಂದು ಶಾಸಕ ಎನ್ .ಮಹೇಶ್ ದಲಿತ ಸಿಎಂ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ವಿಚಾರ ಅವರ ಪಕ್ಷದ ಒಳವಿಚಾರವಾದರೂ ಬಹಿರಂಗ ಚರ್ಚೆಯಾಗುತ್ತಿರುವುದರಿಂದ ನಾನು ಮಾತನಾಡಲೇ ಬೇಕಿದೆ ಎಂದರು.
ಕೂಸು ಹುಟ್ಟುವ ಮುನ್ನವೇ ಕಾಂಗ್ರೆಸ್ ಕುಲಾವಿ ಹೊಲಿಸುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರೇ ಸಿಎಂ ಎನ್ನುವ ಮೂಲಕ ದಲಿತರಿಗೆ ಅಧಿಕಾರವಿಲ್ಲ ಎಂಬ ಸಿಗ್ನಲ್ ಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಕಳೆದ 30 ವರ್ಷಗಳಿಂದ ದಲಿತ ವರ್ಗ ಅಧಿಕಾರದಿಂದ ವಂಚಿತರಾಗಿದ್ದಾರೆ. ಎಲ್ಲ ಸಾಮರ್ಥ್ಯ ಇದ್ದರೂ ಈಗಲೂ ವಂಚನೆ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದರು.
ನೀವು ವೋಟ್ ಹಾಕಿ ನಾವು ರಾಜ್ಯಭಾರ ಮಾಡುತ್ತೇವೆ ಎಂಬಂತಾಗಿದೆ. ದಿಕ್ಕಿಲ್ಲದವರು ದೆವ್ವ ತಬ್ಬಿಕೊಂಡಂತೆ ದಲಿತರು ಕಾಂಗ್ರೆಸ್ನ ಮತಬ್ಯಾಂಕ್ ಆಗಿದ್ದಾರೆ ಎಂದು ಕಿಡಿಕಾರಿದರು. ಶೇ. 1ರಷ್ಟು ಪಾಪ್ಯುಲೇಶನ್ ಇಲ್ಲದಿದ್ದವರೂ ಸಿಎಂ ಆಗಿದ್ದಾರೆ. ಆದರೆ, ಒಂದೂವರೆ ಕೋಟಿಯಷ್ಟಿರುವ ದಲಿತರಿಗಿನ್ನೂ ಅಧಿಕಾರ ಸಿಕ್ಕಿಲ್ಲ, ಕಾಂಗ್ರೆಸ್ಗೆ ವೋಟ್ ಹಾಕುವ ಬಂಧುಗಳಿಗೆ ಇದು ಅರ್ಥವಾಗಬೇಕು ಎಂದಿದ್ದಾರೆ.
ಸ್ಮಾರ್ಟ್ ಕ್ಲಾಸ್ ತರಗತಿಗಳ ಉದ್ಘಾಟನೆ
ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್, ಪಿ.ಸಿ ವಿತರಣೆ ಹಾಗೂ ಸ್ಮಾರ್ಟ್ ಕ್ಲಾಸ್ ತರಗತಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಟ್ಯಾಬ್ ವಿತರಿಸುತ್ತಿದ್ದು, ಈ ಬಾರಿ ಸುಮಾರು 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿದ್ದು ಟ್ಯಾಬ್ನಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ಕೋವಿಡ್ ವೇಳೆಯಲ್ಲೂ ಶೈಕ್ಷಣಿಕ ವ್ಯವಸ್ಥೆಗೆ ತೊಂದರೆಯಾಗದಂತೆ ಆನ್ಲೈನ್ ತರಗತಿಗಳ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುತ್ತಿದ್ದು, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ನೀಡಿ ಓದಿಗೆ ಸಹಕಾರಿಯಾಗಿದೆ ಎಂದರು.
ಓದಿ: Karnataka - Maharashtra ನಡುವೆ 4 ಟಿಎಂಸಿ ನೀರು ವಿನಿಮಯ ಒಪ್ಪಂದ