ಕೊಳ್ಳೇಗಾಲ: ಬಹುನಿರೀಕ್ಷಿತ ಕೊಳ್ಳೇಗಾಲ ಚುನಾವಣೆ ಫಲಿತಾಂಶ ಇದೀಗ ಹೊರಬಿದ್ದಿದ್ದು ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾಗಿ ಶಾಸಕ ಎನ್.ಮಹೇಶ್ ಬೆಂಬಲಿತ ಅಭ್ಯರ್ಥಿ ಗಂಗಮ್ಮ ವರದರಾಜು, ಉಪಾಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಕವಿತಾ ಅಧಿಕಾರದ ಗಾದಿ ಹಿಡಿದಿದ್ದಾರೆ.

ಕಾಂಗ್ರೆಸ್ 11, ಬಿಜೆಪಿ 7, ಬಿಎಸ್ಪಿ 9, ಪಕ್ಷೇತರ 4 ಸೇರಿದಂತೆ ಒಟ್ಟು 31 ಸದಸ್ಯರ ಬಲವಿದ್ದ ಕೊಳ್ಳೇಗಾಲ ನಗರಸಭೆಯಲ್ಲಿ ಬಿಎಸ್ಪಿಯಿಂದ ಹೊರಬಂದ 7 ಅಭ್ಯರ್ಥಿಗಳು ಶಾಸಕ ಎನ್.ಮಹೇಶ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. ಅದರೊಟ್ಟಿಗೆ ಬಿಜೆಪಿಯ 7 ಸದಸ್ಯರು, ಒಬ್ಬ ಪಕ್ಷೇತರ ಸೇರಿದಂತೆ ಸಂಸದರು ಹಾಗೂ ಶಾಸಕರ ತಲಾ ಒಂದು ಮತ ಸೇರಿ ಒಟ್ಟು 17 ಸರಳ ಮತ ಪಡೆದು ಶಾಸಕ ಮಹೇಶ್ ಮತ್ತು ಬಿಜೆಪಿ ಮೈತ್ರಿ ಗೆಲುವು ಸಾಧಿಸಿದೆ.
ಈ ಬಗ್ಗೆ ಮಾತನಾಡಿದ ಚುನಾವಣಾಧಿಕಾರಿ ಗಿರೀಶ್ ದಿಲೀಪ್ ಬದೋಲೆ, ಶಾಸಕರ ಅಭ್ಯರ್ಥಿ ಗಂಗಮ್ಮ 17 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿ ಅಭ್ಯರ್ಥಿ ಕವಿತಾ 17 ಮತ ಪಡೆದು ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಲತಾ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಶೀಲಾ ತಲಾ 14 ಮತ ಪಡೆದು ಪರಾಭವಗೊಂಡಿದ್ದಾರೆ. ಬಿಎಸ್ಪಿಯ ಜಯಮರಿ 2 ಮತ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ ಪ್ರತಿಷ್ಠೆಯ ಕಣವಾಗಿದ್ದ ಬಹು ನಿರೀಕ್ಷಿತ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಶಾಸಕ ಎನ್.ಮಹೇಶ್ ಗೆಲುವಿನ ನಗೆ ಬೀರಿದ್ದಾರೆ.