ಚಾಮರಾಜನಗರ: ದಟ್ಟ ಕಾನನ, ಪ್ರಾಣಭಯದಿಂದಲೇ ಹೆಜ್ಜೆ ಇಡಬೇಕಾದ ಕಾಡು ಹಾದಿ, ಆಗಾಗ್ಗೆ ಆನೆಗಳ ಸದ್ದು ಕೇಳುತ್ತಲೇ ಹತ್ತಿರವಾಗುತ್ತದೆ ಕಾಡಿನ ಕೌತುಕವಾಗಿರುವ ಮಾಸ್ತಿಗುಡಿ. ಅಂದಹಾಗೆ ಇದು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವ್ಯಾಪ್ತಿಯಲ್ಲಿ ಬರುವ ಕರಡಿಗುಡ್ಡದ ಮಾಸ್ತಿಗುಡಿಯ ವಿಸ್ಮಯಗಳ ತಾಣ.
ಮಾವು, ಹೊನ್ನೆ, ಬೀಟೆ ಮರಗಳ ಬುಡದಿಂದ ಸದಾ ನೀರು ಬರಲಿದ್ದು, ಬರಗಾಲದಲ್ಲೇ ಹೆಚ್ಚು ಹರಿಯುವುದು ನಿಜಕ್ಕೂ ಅಚ್ಚರಿ ಎನಿಸಿದೆ. ಕಾಡಿನಮಕ್ಕಳ ಆರಾಧ್ಯ ದೇವರಾದ ಮಾಸ್ತಮ್ಮನ ಗುಡಿ ಇಲ್ಲಿದ್ದು, ಗಿರಿಜನರ ಕಷ್ಟಗಳನ್ನು ಮಾಸ್ತಮ್ಮ ಪರಿಹರಿಸುತ್ತಾಳೆ ಎನ್ನುವುದು ಅಚಲ ನಂಬಿಕೆಯಾಗಿದೆ. ಹುಲಿ ಸಂರಕ್ಷಿತ ಪ್ರದೇಶವಾದ್ದರಿಂದ ಇಲ್ಲಿ ಬರಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಬೇಕೆ ಬೇಕು.
ಸದಾ ತಂಪನೆಯ ನೀರು ಮರದ ಬುಡದಿಂದ ಸದಾ ಹರಿಯುತ್ತಿದೆ. ಇದು ಎಂದೂ ನಿಂತಿಲ್ಲ ಅಂತಾರೆ ಇಲ್ಲಿನ ಗಿರಿಜನರು. ನೀರು ಸುರಿಯುತ್ತಿರುವುದರಿಂದ ಹಳ್ಳವೊಂದು ರೂಪುಗೊಂಡಿದ್ದು ಆನೆ, ಹುಲಿ, ಕರಡಿ, ಜಿಂಕೆ, ಕಡವೆಗಳ ದಾಹ ತಣಿಸುವ ನಿಚ್ಚಿನ ತಾಣ. ಯಾವುದೇ ಶುಭಕಾರ್ಯ- ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಕಾಡಿನ ಮಕ್ಕಳು ಮಾಸ್ತಿಗುಡಿ ಮೊರೆ ಹೋಗುತ್ತಾರೆ.
ಎದೆಹಾಲು ವೃದ್ಧಿಸುವ ನಂಬಿಕೆ..!
ಅಪೌಷ್ಟಿಕತೆಯಿಂದೆ ಬಾಣಂತಿಯರು ಮಕ್ಕಳಿಗೆ ಎದೆಹಾಲು ನೀಡಲು ಸಾಧ್ಯವಾಗದಿದ್ದಾಗ ಈ ನೀರನ್ನು ಸೇವಿಸಿದರೆ ಎದೆಹಾಲು ಉತ್ಪತ್ತಿಯಾಗಲಿದೆ ಅನ್ನೋದು ಇಲ್ಲಿನವರ ದೊಡ್ಡ ನಂಬಿಕೆಯಾಗಿದೆ. ನೀರಿಗಾಗಿಯೇ ದೂರದ ದೆಹಲಿಯಿಂದಲೂ ಹಲವರು ಬಂದಿದ್ದಾರೆ ಎಂದು ಪಕ್ಕದ ಪೋಡಿನಲ್ಲಿರುವ ಜನರು ತಿಳಿಸುತ್ತಾರೆ.
ಇನ್ನು, ಪ್ರತಿ ಯುಗಾದಿ ಮಾರನೇ ದಿನ ಸುತ್ತಲಿನ ಪೋಡುಗಳ ಜನರು ಮಾಸ್ತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಕಾಲನಿಗಳಲ್ಲಿ ಕೊಂಡ ಹಾಯ್ದು ಭಕ್ತಿ, ಭಾವ ಮೆರೆಯುತ್ತಾರೆ. ಎಲ್ಲಿಂದ ನೀರು ಬರುತ್ತದೆ ಎಂಬ ಕೌತುಕಕ್ಕೆ ಇದು ಮಾಸ್ತಮ್ಮನ ಪವಾಡ ಅಂತ ಹೇಳೋರೆ ಹೆಚ್ಚು. ಕಾಡು ಎಂದರೆ ಕೌತುಕ ಅಂತದ್ದರಲ್ಲಿ ದೊಡ್ಡ ಅಚ್ಚರಿಯನ್ನೇ ಒಡಲಲ್ಲಿ ಇಟ್ಟುಕೊಂಡಿರುವ ಮಾಸ್ತಿಗುಡಿ ತೀವ್ರ ಬರದಲ್ಲೂ ಪ್ರಾಣಿಗಳಿಗೆ ಜೀವಜಲವಾಗಿದೆ.