ಗುಂಡ್ಲುಪೇಟೆ/ಚಾಮರಾಜನಗರ : ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಜೊತೆಯಲ್ಲಿ ಕೆಲಸ ಮಾಡುವ ಮೂಲಕ ಉತ್ಸಾಹ ತುಂಬಿದರು.
ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗರಕಟ್ಟೆಗೆ ಭೇಟಿ ನೀಡಿ, ಕಾರ್ಮಿಕರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಬಳಿಕ ಎಷ್ಟು ಕೂಲಿ ಸಿಗುತ್ತದೆ. ಏನು ಮಾಡುತ್ತಿದ್ದೀರಿ, ಕೂಲಿಗಾಗಿ ಕೆಲಸ ಮಾಡುವ ಬದಲು, ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಿ, ಗಳಿಸಿದ ಹಣವನ್ನು ಮದ್ಯಕ್ಕೆ ಸುರಿಯಬೇಡಿ, ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ಮನವಿ ಮಾಡಿದರು.
ಬಳಿಕ ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ಸಿ.ಎಸ್.ನಿರಂಜನ ಕುಮಾರ್ ಹಾರೆ, ಗುದ್ದಲಿ ಹಿಡಿದು ಗುಂಡಿ ತೋಡಿ ಮಣ್ಣು ಎತ್ತಿದರು.
ಗ್ರಾಪಂಗೆ ನೂರಾರು ಮಹಿಳೆಯರ ಮುತ್ತಿಗೆ :
ಚಾಮರಾಜನಗರ: ನರೇಗಾ ಕಾಮಗಾರಿಯಲ್ಲಿ ಪಿಡಿಒ ಕಿರಿಕಿರಿ ಮಾಡುತ್ತಿದ್ದಾರೆಂದು ಆರೋಪಿಸಿ ನೂರಾರು ಮಹಿಳೆಯರು ಕಾಗಲವಾಡಿ ಗ್ರಾಪಂಗೆ ಮುತ್ತಿಗೆ ಹಾಕಿ ಧರಣಿ ಕುಳಿತಿದ್ದಾರೆ.
ನರೇಗಾ ಯೋಜನೆ ಅಡಿ ಗ್ರಾಪಂ ವತಿಯಿಂದ ಕೆರೆ ಕೆಲಸ ಮಾಡುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾದೇವಸ್ವಾಮಿ ಎಂಬುವರು ಒಂದು ದಿನಕ್ಕೇ ಇಷ್ಟೇ ಕೆಲಸ ಮಾಡಬೇಕೆಂದು ಮಹಿಳೆಯರಿಗೆ ಟಾರ್ಗೆಟ್ ನೀಡುತ್ತಿದ್ದಾರೆ. ಒಂದು ದಿನಕ್ಕೆ ಹೇಳಿದಷ್ಟು ಕೆಲಸ ಮಾಡದಿದ್ದರೆ ಕೆಲಸ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ಕಾರ್ಮಿಕರಿಗೆ ಹಿಂಸೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.
![ಗುಂಡ್ಲುಪೇಟೆಯಲ್ಲಿ ನರೇಗಾ ಕಾರ್ಮಿಕರ ಜತೆ ಕೆಲಸ ಮಾಡಿದ ಸಚಿವ](https://etvbharatimages.akamaized.net/etvbharat/prod-images/kn-cnr-01-prorest-av-7202614_15052020112640_1505f_1589522200_350.jpg)
ಇದರಿಂದ ಆಕ್ರೋಶಗೊಂಡ ಕಾಗಲವಾಡಿ, ಕಾಗಲವಾಡಿ ಮೋಳೆ, ಅಮ್ಮನಪುರ ಗ್ರಾಮಗಳ ಮಹಿಳೆಯರು ಇಂದು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ, ಪಿಡಿಒ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ ಸ್ಥಳಕ್ಕೆ ಜಿಪಂ ಸಿಇಒ, ಇಒ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ಸದ್ಯ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.