ಚಾಮರಾಜನಗರ: ಕೇರಳ ಗಡಿ ತಾಲೂಕಾದ ಗುಂಡ್ಲುಪೇಟೆಯ ಮೂಲೆಹೊಳೆ ಚೆಕ್ಪೋಸ್ಟ್ಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಖುದ್ದು ವಾಹನಗಳ ತಪಾಸಣೆ ನಡೆಸಿದ್ದಾರೆ.
ಗಡಿಯಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ರಾಜ್ಯದೊಳಗೆ ಪ್ರವೇಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಪ್ರತಿ ವಾಹನ ಹಾಗೂ ವ್ಯಕ್ತಿಯ ಮಾಹಿತಿಯನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ, ದಾಖಲಾತಿ ಪರಿಶೀಲನೆ ನಡೆಸಿ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ನಾನು ಬರುವಾಗ ರಸ್ತೆಯಲ್ಲಿ ಎಷ್ಟು ವಾಹನಗಳು ಸಂಚಾರ ಮಾಡುತ್ತಿದೆ ಎಂಬುದನ್ನು ಲೆಕ್ಕ ಹಾಕಿಕೊಂಡು ಬಂದೆ. ಆದರೆ ಅದಕ್ಕೂ ಇಲ್ಲಿ ಬರೆದಿರುವ ಲೆಕ್ಕಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗರಂ ಆದರು.
ಕೇರಳ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಸಂಚಾರ ಮಾಡುವ ಎಲ್ಲಾ ವಾಹನಗಳ ವಿವರ ಇರಬೇಕು, ರಾಜ್ಯದಿಂದ ಸರಕು ಸಾಗಣೆಯ ವಾಹನಗಳು ಮರಳಿ ಬರುವಾಗ ಸ್ಯಾನಿಟೈಸ್ ಮಾಡಬೇಕು. ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಇರಲೇಬೇಕು ಎಂದು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ, ಮಾಲ್, ಪಾರ್ಕ್ ಮತ್ತು ಹೆಚ್ಚು ಜನ ಸೇರುವ ಜಾಗದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜನರನ್ನು ಜಾಗೃತರನ್ನಾಗಿ ಮಾಡಬೇಕು. ಇದಕ್ಕಾಗಿ ಹೋಟೆಲ್, ಪೆಟ್ರೋಲ್ ಬಂಕ್, ದಿನಸಿ ಅಂಗಡಿ, ಬೇಕರಿ ಇತ್ಯಾದಿ ಉದ್ದಿಮೆಗಳ ಅಧ್ಯಕ್ಷರನ್ನು ಕರೆದು ಸಭೆ ನಡೆಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದನ್ನೂ ಓದಿ: ವಿಮ್ಸ್ ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಕೊರೊನಾ: ಇಂದು ನಾಲ್ವರಿಗೆ ಸೋಂಕು