ಚಾಮರಾಜನಗರ: ಆಮೆ ವೇಗದಲ್ಲಿ ನಡೆಯುತ್ತಿರುವ ಬಿಳಿಗಿರಿರಂಗನ ಬೆಟ್ಟದ ದೇಗುಲ ಕಾಮಗಾರಿ ಸ್ಥಳಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಕಳೆದ ಐದು ವರ್ಷಗಳಿಂದ ದೇವಸ್ಥಾನದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮೂಲ ಮೂರ್ತಿಯ ಪೂಜೆಯೂ ಸಹ ನಿಂತು ಹೋಗಿತ್ತು. ಇದರಿಂದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದ ದೇವಾಲಯಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಖುದ್ದು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಕಾಮಗಾರಿಯಿಂದ ವರ್ಷಕ್ಕೆ ಎರಡು ಬಾರಿ ನಡೆಯುವ ರಥೋತ್ಸವವು ಸಹ ಕಳೆದ ಐದು ವರ್ಷದಿಂದ ನಿಂತು ಹೋಗಿದೆ. ಗಿರಿಜನ ಹಾಗೂ ಹಿಂದುಳಿದ ವರ್ಗದ ಅಪಾರ ಭಕ್ತರನ್ನು ಹೊಂದಿರುವ ಬಿಳಿಗಿರಿರಂಗನ ದೇವಸ್ಥಾನ ಕಾಮಗಾರಿಯ ವಿಳಂಬ ಹಲವು ಅಯಾಮ ಪಡೆದುಕೊಂಡಿತ್ತು. ಕಾಮಗಾರಿ ವೀಕ್ಷಣೆ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸಚಿವ ಸುರೇಶ್ ಕುಮಾರ್, ಮಾರ್ಚ್ 15ರ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ದೇವಸ್ಥಾನದ ಕಾಮಗಾರಿ ವಿವರ ಪಡೆದ ಅವರು, 2017ರಲ್ಲಿ ಭಕ್ತರಿಂದ 80 ಲಕ್ಷ ರೂ.ಗಳ ಕಾಮಗಾರಿ ಆಗಿರುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ಲದರ ಬಗ್ಗೆ ಅಶ್ಚರ್ಯಪಟ್ಟರು. ಅಲ್ಲದೇ ಜಿಲ್ಲಾಧಿಕಾರಿ ಗಮನಕ್ಕೂ ಬಾರದೇ ನಡೆದಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.