ಕೊಳ್ಳೇಗಾಲ (ಚಾಮರಾಜನಗರ): ದೈಹಿಕ, ಮಾನಸಿಕ ಸ್ಥಿರತೆ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಕಲೆಯಾಗಿರುವ ಕರಾಟೆ ಮಕ್ಕಳ ಬೆಳವಣಿಗೆ ಹಂತದಲ್ಲಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ.
ಇಂತಹ ಬಲಾಡ್ಯ ಕರಾಟೆ ಪಟುಗಳನ್ನು ಕೊಳ್ಳೇಗಾಲದಲ್ಲಿ ಸಚಿವ ಸುರೇಶ್ ಕುಮಾರ್ ಪ್ರಶಂಸಿದ್ದಾರೆ. ಕರಾಟೆ ಆತ್ಮ ರಕ್ಷಣೆಗೆ ಇರುವ ಕಲೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಪೋಷಕರು ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಒತ್ತಾಯ ಮಾಡುವುದು ಸಾಮಾನ್ಯ ವಿಷಯ. ಸದ್ಯ ಶಿಕ್ಷಣ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ.
ಆದರೆ ಸದೃಢ ಹಾಗೂ ಎದೆಗಾರಿಕೆಯ ಜೀವನ ಪ್ರಾರಂಭಿಸಲು ಮಕ್ಕಳಿಗೆ ಶಿಕ್ಷಣದ ಅರಿವಿನ ಜೊತೆಗೆ ದೈಹಿಕ ಸಾಮಾರ್ಥ್ಯ ಬೇಕು. ಓದಿನ ತಿಳುವಳಿಕೆ ಹಾಗೂ ಬುದ್ಧಿವಂತಿಕೆ ಮಾತ್ರ ಇದ್ದರೆ ಸಾಲದು, ಜೀವನದಲ್ಲಿ ಆಕಸ್ಮಿಕವಾಗಿ ಎದುರಾಗುವ ತೊಂದರೆ ಮತ್ತು ಕಷ್ಟಗಳಿಗೆ ಸ್ಪಂದಿಸುವ ದೇಹ ಸಾಮಾರ್ಥ್ಯವೂ ಕೂಡ ಬೇಕಾಗಿರುತ್ತದೆ.
ಈ ನಿಟ್ಟಿನಲ್ಲಿ ಪ್ರತಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಕರಾಟೆ ಕಲೆ ಅವಶ್ಯವೆಂದರೆ ತಪಾಗಲಾರದು. ಈ ನಿಟ್ಟಿನಲ್ಲಿ ಕೊಳ್ಳೇಗಾಲದಲ್ಲಿ ಕಳೆದ 10 ವರ್ಷಗಳಿಂದ ಕರಾಟೆ ತರಬೇತಿ ಕೊಡುವುದನ್ನೇ ವೃತ್ತಿ ಮಾಡಿಕೊಂಡಿರುವ ಮಾಸ್ಟರ್ ನಂಜುಂಡಸ್ವಾಮಿ ( ಬ್ಲ್ಯಾಕ್ ಬೆಲ್ಟ್) ಮಕ್ಕಳಿಗೆ ಕೈಗೆಟುಕುವ ದರದಲ್ಲಿ ಇಲ್ಲಿನ ಸಹನ ಸ್ಕೂಲ್ ಆವರಣದಲ್ಲಿ ಕರಾಟೆ ಹೇಳಿಕೊಡುತ್ತಿದ್ದಾರೆ.
ಆದರೆ ಕಲಿಯುವ ಮಕ್ಕಳಿಗೆ ಹಣ ನೀಡಬೇಕೆಂಬ ಒತ್ತಾಯ ಮಾಡದ ಈ ಮಾಸ್ಟರ್, ಸಾವಿರಾರು ಮಕ್ಕಳಿಗೆ ಉಚಿಯವಾಗಿಯೇ ತಮ್ಮ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ.
ಸಚಿವ ಸುರೇಶ್ ಕುಮಾರ್ ಪ್ರಶಂಸೆ: ಪ್ರತಿ ವಾರದಂತೆ 10 ಕಿಲೋ ಮೀಟರ್ ಓಟವನ್ನು ನಡೆಸುತ್ತಿದ್ದ ಮಕ್ಕಳನ್ನು ರಸ್ತೆಯಲ್ಲಿ ನೋಡಿದಾಗ ಖುದ್ದು ಸಚಿವರೇ ಮಾಸ್ಟರ್ ನಂಜುಂಡಸ್ವಾಮಿ ಹಾಗೂ ಕರಾಟೆ ಮಕ್ಕಳನ್ನು ಕರೆಸಿ ಬೆನ್ನು ತಟ್ಟಿದ್ದಾರೆ. ಮಕ್ಕಳ ಕರಾಟೆ ಡ್ರೆಸ್ ನೋಡಿ ಫೀದಾ ಆಗಿದ್ದಾರೆ. ಇದಲ್ಲದೆ ತಮ್ಮ ಸ್ವಂತ ಖಾತೆಯ ಫೇಸ್ಬುಕ್ನಲ್ಲಿ ಸ್ವತಃ ಮಕ್ಕಳ ನಡುವಿನ ಸಂಭಾಷಣೆಯನ್ನು ಶೇರ್ ಮಾಡಿರುವುದು ವೈರಲ್ ಆಗಿದೆ.
ಕಡಿಮೆ ಹಣದಲ್ಲಿ ಮಕ್ಕಳಿಗೆ ಕರಾಟೆ: ಲಾಭಕ್ಕಷ್ಟೇ ಕರಾಟೆ ಕಲೆ ಹೇಳಿಕೊಡದ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿದ ಮಾಸ್ಟರ್ ನಂಜುಂಡಸ್ವಾಮಿ, ಕಲಿಕೆಗೆ ಬರುವ ಮಕ್ಕಳಿಗೆ ತಿಂಗಳಿಗೆ 350 ರೂಪಾಯಿ ದರ ನಿಗದಿ ಮಾಡಿದ್ದಾರೆ.
ಆದರೆ ಇದುವರೆಗೂ ಯಾವುದೇ ಮಕ್ಕಳಿಗೆ ಹಣಕ್ಕಾಗಿ ಪೀಡಿಸಿಲ್ಲ ಎಂದು ಅಲ್ಲಿನ ಕರಾಟೆ ಪಟುಗಳು ಹೇಳುತ್ತಾರೆ. ಸರ್ಕಾರಿ ಶಾಲೆಯ ಇನ್ನೂ ವಿಶೇಷವಾಗಿ ಕೊಳ್ಳೇಗಾಲದ ಸರ್ಕಾರಿ ಎಸ್.ವಿ.ಕೆ ಶಾಲೆಯ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕರಾಟೆ ಕ್ಲಾಸ್ ನಡೆಸುವ ಇವರು, ಸಾವಿರಾರು ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿದ್ದಾರೆ. ರಾಜ್ಯ ಮಟ್ಟದಲ್ಲೂ ಕೂಡ ಈ ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಹೆಚ್ಚಿನ ಒತ್ತು: ಗ್ರಾಮೀಣ ಭಾಗದ ಮಕ್ಕಳಿಗೆ ಕರಾಟೆ ಕಲಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಶುಲ್ಕ ನೀಡದ ಮಕ್ಕಳಿಗೂ ಉಚಿತ ಕರಾಟೆ ತರಬೇತಿ ಕಲಿಸಲಾಗುತ್ತಿದೆ. ಕೊಳ್ಳೇಗಾಲದ ಕರಾಟೆ ಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿವಂತೆ ಮಾಡಿ ಜಿಲ್ಲೆಗೆ ಹೆಸರು ತರುವ ಗುರಿ ಇವರದ್ದಾಗಿದೆ. ವಾರದಲ್ಲಿ ಮಕ್ಕಳಿಗೆ 5 ದಿನ ಕರಾಟೆ ಹೇಳಿಕೊಡುತ್ತಾರೆ. ಮಕ್ಕಳನ್ನು ವಾರಕ್ಕೊಮ್ಮೆ 10 ಕಿಲೋ ಮೀಟರ್ ಓಡಿಸಲಾಗುತ್ತದೆ. 6 ವರ್ಷದ ಮಕ್ಕಳಿಂದ ಶುರುವಾಗಿ 14 ವರ್ಷದ ಮಕ್ಕಳು ರನ್ನಿಂಗ್ನಲ್ಲಿ ಭಾಗಿಯಾಗುವುದು ಗಮನಾರ್ಹ.