ಚಾಮರಾಜನಗರ: ಸದಾ ತಮ್ಮ ಅಭಿಪ್ರಾಯಗಳು, ತಾವು ಭೇಟಿ ಮಾಡಿದ ವ್ಯಕ್ತಿಗಳು, ಜಿಲ್ಲಾ ಪ್ರವಾಸ- ಸಭೆ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಸದ್ಯಕ್ಕೆ ಇನ್ ಆಕ್ಟಿವ್ ಆಗಿದ್ದಾರೆ.
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಆಳ-ಅಗಲ, ಅಭಿಪ್ರಾಯ ಹಂಚಿಕೆಗೆ ಸೂಕ್ತ ವೇದಿಕೆ ಎಂಬುದನ್ನು ಅರಿತ ಡಿಸಿ ಡಾ.ಎಂ.ಆರ್.ರವಿ ತಾವು ಜಿಲ್ಲೆಗೆ ಬಂದ ಹೊಸ್ತಿಲಲ್ಲೇ ಡಿಸಿ ಚಾಮರಾಜನಗರ ಎಂಬ ಫೇಸ್ಬುಕ್ ಖಾತೆ ತೆರೆದು ತಮ್ಮ ಪ್ರವಾಸ, ಸಭೆ, ಕೊರೊನಾ ಜಾಗೃತಿ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರತಿ ದಿನ ತಾವು ನಿರ್ವಹಿಸಿದ ಕಾರ್ಯಗಳು, ಸಭೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಡಿಸಿ ಕೆಲವೊಮ್ಮೆ ಫೇಸ್ಬುಕ್ ಲೈವ್ನಲ್ಲಿ ಜಿಲ್ಲೆಯ ಕೊರೊನಾ ನಿರ್ವಹಣೆ, ಸೋಂಕಿನ ವಿವರಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು.
ಆದರೆ ಮೇ 2 ರಂದು ಕೋವಿಡ್ ಕೇರ್ ಸೆಂಟರ್ನಲ್ಲಿ ನೀಡುವ ಉಪಹಾರ ವ್ಯವಸ್ಥೆಯ ಬಗ್ಗೆ ಪೋಸ್ಟ್ ಮಾಡಿದ್ದೇ ಕೊನೆಯಾಗಿದ್ದು, ಅದಾದ ಬಳಿಕ ಯಾವುದೇ ಪೋಸ್ಟ್ ಮಾಡಿಲ್ಲ. ಆದರೆ, ಡಾ.ಎಂ.ಆರ್.ರವಿ ಅಭಿಮಾನಿ ಬಳಗ ಎಂಬ ಖಾತೆಯಲ್ಲಿ ಜಿಲ್ಲಾಧಿಕಾರಿಗಳ ಪ್ರವಾಸ, ಅವರ ಭಾಷಣಗಳ ಬಗ್ಗೆ ಆಗಾಗೆ ಪೋಸ್ಟ್ ಆಗುತ್ತಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಈ ಹಿಂದೆ ಫೇಸ್ಬುಕ್ನಲ್ಲಿ ಸಕ್ರಿಯವಾಗಿ ತಾವು ಕಂಡ, ಭೇಟಿ ಮಾಡಿದ ವಿವರಗಳನ್ನು, ಓದಿದ ಪುಸ್ತಕಗಳು, ಇಷ್ಟ ಪಡುವ ನಾಯಕರು, ನೇತಾರರನ್ನು ನೆನೆಯುವ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚಿಗೆ ಸಚಿವರೂ ಕೂಡ ಇನ್ ಆಕ್ಟೀವ್ ಆಗಿದ್ದಾರೆ. ಮೇ 2 ರವರೆಗೆ ಪ್ರತಿದಿನವೂ ಪೋಸ್ಟ್ಗಳನ್ನು ಹಾಕುತ್ತಿದ್ದ ಸಚಿವರು ಮೇ 6 ಮತ್ತು ಮೇ 20 ರಂದು ಒಂದು ಪೋಸ್ಟ್ ಮಾಡಿದ್ದಾರೆ.
ಪೊಲೀಸರು ಆಕ್ಟಿವ್:
ಇನ್ನೊಂದೆಡೆ ಜಾಗೃತಿ ಮತ್ತು ಮಾಹಿತಿ ಹಂಚಿಕೊಳ್ಳಲು ಪೊಲೀಸರು ಇತ್ತೀಚೆಗೆ ಹೆಚ್ಚು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಖಾತೆಯಲ್ಲಿ ERSS ವಾಹನ, ಕೊರೊನಾ ಜಾಗೃತಿ, ಪೊಲೀಸರ ಜನಸ್ನೇಹಿ ಕಾರ್ಯಗಳ ಬಗ್ಗೆ ನಿತ್ಯ ಒಂದಿಲ್ಲೊಂದು ಪೋಸ್ಟ್ ಹಾಕಲಾಗುತ್ತಿದೆ.
ಏಪ್ರಿಲ್ ಅಂತ್ಯದಲ್ಲಿ ಎಸ್ಪಿ ಚಾಮರಾಜನಗರ ಎಂಬ ಫೇಸ್ಬುಕ್ ಖಾತೆ ಹೆಚ್ಚು ಸಕ್ರಿಯವಾಗಿದ್ದು, ಇದಕ್ಕೂ ಮುನ್ಮ ತಿಂಗಳಿಗೆ ಮೂರು-ನಾಲ್ಕು ಪೋಸ್ಟ್ಗಳಷ್ಟೇ ಇವೆ. ಇದರೊಟ್ಟಿಗೆ ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳು ಈಗ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆ ತೆರೆದಿದ್ದು, ಠಾಣಾ ವ್ಯಾಪ್ತಿಯ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಡಿಸಿಗಳ ಮುಸುಕಿನ ಗುದ್ದಾಟಕ್ಕೆ ಸಚಿವ ಸುರೇಶ್ ಕುಮಾರ್ ಬ್ರೇಕ್.. ಮಾಧ್ಯಮದ ಮುಂದೆ ಹೇಳಿಕೆ ನೀಡದಂತೆ ತಾಕೀತು!