ಚಾಮರಾಜನಗರ : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರೀಕ್ಷೆ ಮೀರಿ ಕೊರೊನಾ ಹತೋಟಿ ತಪ್ಪಿದೆ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಮಾಡಬೇಕೆಂಬ ಅಂದಾಜಿತ್ತು.
ಈಗ ನಮ್ಮ ನಿರೀಕ್ಷೆ ಮೀರಿ ಎಫೆಕ್ಟ್ ಆಗ್ತಿದೆ. ಲಾಕ್‌ಡೌನ್ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ಜೀವ ಹಾಗೂ ಜೀವನ ಎರಡನ್ನೂ ನೋಡಬೇಕಾದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕಳೆದ ಬಾರಿ ಲಾಕ್‌ಡೌನ್ ಮಾಡಿದ ಪರಿಣಾಮ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಕಸುಬುದಾರರಿಗೆ ಕೆಲಸ ನಿಲ್ಲಿಸಿ ಅಂದ್ರೆ ಅವರಿಗೆ ಪರಿಹಾರ ಕೊಡಬೇಕು. ಲಾಕ್‌ಡೌನ್ ಮಾಡಿ ಅಂತಾರೆ, ಇಂಡಸ್ಟ್ರಿಗಳು, ಆಟೋ ಡ್ರೈವರ್ ಕೆಲಸ ನಿಲ್ಲಿಸಿದ್ರೆ ತುಂಬಾ ತೊಂದರೆಯಾಗುತ್ತೆ. ಇದನ್ನೆಲ್ಲಾ ಯೋಚಿಸಿ ನಿರ್ಧಾರ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯಕ್ಕೆ ರಾಜ್ಯದಲ್ಲಿ ಬೆಡ್ ಸಮಸ್ಯೆ ಉದ್ಭವಿಸಿಲ್ಲ, ಪ್ರತಿ ಜಿಲ್ಲೆಯಲ್ಲಿ 200-400 ಬೆಡ್, ತಾಲೂಕುಗಳಲ್ಲಿ 50 ಬೆಡ್ ವ್ಯವಸ್ಥೆ ಹಾಗೂ 4-5 ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೆಚ್ಚು ಹೋಂ ಕ್ವಾರೈಂಟೈನ್ಗೆ ಒತ್ತು ಕೊಡಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಶೇ.50ರಷ್ಟು ಕಡ್ಡಾಯವಾಗಿ ಕೊರೊನಾ ಸೋಂಕಿತರಿಗೆ ಕೊಡಬೇಕು. ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯದೇ ರಾಜ್ಯ ಸರ್ಕಾರದಿಂದ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ, ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 64 ಕೆರೆಗಳನ್ನು ತುಂಬಿಸಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕಿನ ಕೆರೆಗಳನ್ನು ನಾಲೆ, ಪೈಪ್ಲೈನ್ ಮೂಲಕ ತುಂಬಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.