ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಂತೆ ನನಗೆ ಅನ್ನಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಎಂದು ಹೇಳುತ್ತದೆ. ಪ್ರಾಧಿಕಾರ ನಮ್ಮ ಮನವಿಯನ್ನು ಕೇಳ್ತಾನೇ ಇಲ್ಲ. ಪ್ರಾಧಿಕಾರ ನಮ್ಮ ಪರ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಇರುವ ನೀರು ನಮಗೇ ಸಾಕಾಗುತ್ತಿಲ್ಲ. ನಾವು ರೈತರನ್ನು ಬಲಿ ಕೊಡಲು ತಯಾರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಚರ್ಚೆ ನಡೆಸುತ್ತೇವೆ. ಮೊದಲಿಂದಲೂ ಕೂಡ ಪ್ರಾಧಿಕಾರ ನಮ್ಮ ಪರ ನಿಂತಿಲ್ಲ. ನಮಗೆ ನೀರಿಲ್ಲ ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು ಎಂದು ಪ್ರಶ್ನಿಸಿದರು.
ಮಾದಪ್ಪನಿಗೆ ವಿಶೇಷ ಪೂಜೆ: ಪ್ರಸಿದ್ಧ ಯಾತ್ರಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಇವತ್ತು ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಜನರಿಗೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಬರಗಾಲ ಕಳೆದು, ಉತ್ತಮ ಮಳೆಯಾಗಬೇಕು. ಆ ಮೂಲಕ ಕಾವೇರಿ ಸಂಕಷ್ಟ ಸಹ ಬಗೆಹರಿಯಲಿ ಎಂದು ಮಾದಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಮಳೆಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಕಾಡೊಳಗಿನ ಗ್ರಾಮಗಳಿಗೆ ವಾಹನ ಸೌಕರ್ಯ ಕಲ್ಪಿಸುವ ಜನವನ ಸಾರಿಗೆಗೆ ಸಚಿವರು ಚಾಲನೆ ನೀಡಿದರು.
ಇದನ್ನೂ ಓದಿ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಯನ ಪ್ರವಾಸ: ಗುವಾಹಟಿಗೆ ಹೊರಟ ರಾಜ್ಯದ ನಾಯಕರು