ಚಾಮರಾಜನಗರ: ಹಳ್ಳ-ಕೊಳ್ಳಗಳಿಂದ ತುಂಬಿ ತುಳುಕುತ್ತಿರುವ ಪುಣಜನೂರು ಮೂಲಕ ಚಾಮರಾಜನಗರ ಹಾಗೂ ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಇಂದು ಶುಕ್ರದೆಸೆ ಒದಗಿ ಬಂದಿದ್ದು, ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆನ್ಲೈನ್ ಮೂಲಕ ಚಾಲನೆ ನೀಡಿದ್ದಾರೆ.
ಈ ಪುಣಜನೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾಮಗಾರಿಯಿಂದಾಗಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿಸಿದಂತಾಗಿದೆ. ಇದರಿಂದ ಜಿಲ್ಲೆಯಲ್ಲಿ ಅಂತರಾಜ್ಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ಸಿಗುತ್ತದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
13.53 ಕೋಟಿ ರೂ. ಅಂದಾಜು ವೆಚ್ಚದ ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕೆಂದು ಇದೇ ವೇಳೆ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
ಕೇಂದ್ರ ಸಚಿವರ ಸೂಚನೆ ಬಳಿಕವಾದರೂ ಕಾಮಗಾರಿ ಬೇಗ ಮುಗಿದು ಸುಗಮ ಸಂಚಾರಕ್ಕಾಗಿ ಅವಕಾಶ ಸಿಗುವುದೇ, ಇಲ್ಲಾ ಸಚಿವರ ಸೂಚನೆಗೆ ತುಪ್ಪ ಸವರಿ ಯಥಾಸ್ಥಿತಿ ಹಳ್ಳ-ಕೊಳ್ಳ ರಸ್ತೆಗಳೇ ಮುಂದುವರಿಯುವುದೋ ಕಾದು ನೋಡಬೇಕು.