ಚಾಮರಾಜನಗರ: ಮಿಲ್ಟ್ರಿ ಮಾದೇವ ಅಂದ್ರೆ ಸಾಮಾನ್ಯ ಜನರಿಗಿಂತ ಅರಣ್ಯ ಇಲಾಖೆಗೆ ಹಾಗೂ ಕಾಡಿನ ಜೊತೆ ನಂಟಿದ್ದವರಿಗೆ ಚಿರಪರಿಚಿತ ಹೆಸರು. ಕಾನನದ ಜ್ಞಾನವನ್ನು ನಟ ಪುನೀತ್ ರಾಜ್ಕುಮಾರ್ ಅವರಿಗೆ ಉಣ ಬಡಿಸಿದ ಕುರಿತು ಈಟಿವಿ ಭಾರತದೊಂದಿಗೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ವೀಕ್ಷಕ ಮಾದೇವ ಅಲಿಯಾಸ್ ಮಾಡಿ ಮಿಲ್ಟ್ರಿ ಮಾದೇವ ಅಭಿಪ್ರಾಯ ಹಂಚಿಕೊಂಡಿದ್ದಾರೆ.
15 ದಿನದಲ್ಲಿ ಚಿರತೆ, ಕಾಟಿ, ಆನೆ ದರ್ಶನ: ಸರಿಸುಮಾರು 15 ದಿನ ಅಪ್ಪು ಜೊತೆಗಿದ್ದು, ಅವರನ್ನ ಜೋಡಿಗೆರೆ, ರಾಗಿಕಲ್ಲುಮಡು, ಭೂತಮಡು, ಮಾರಿಮಡು ಅರಣ್ಯ ಪ್ರದೇಶಗಳಿಗೆ ಕರೆದೊಯ್ದು ತೋರಿಸಿದ್ದೇನೆ. ಚಿರತೆ , ಕಾಟಿ, ಆನೆ ಹಿಂಡನ್ನು ನೋಡಬೇಕೆಂದರು ತೋರಿಸಿದೆ. ಆನೆಯೊಂದು ಜೋಳದ ಹೊಲಕ್ಕೆ ನುಗ್ಗಿ ಫಸಲು ನಾಶ ಮಾಡುವಾಗ ಮಧ್ಯರಾತ್ರಿ ಪುನೀತ್ ಮತ್ತು ನಾವು ತಲೆಗೆ ಬ್ಯಾಟರಿ ಹಾಕಿಕೊಂಡು ಆನೆ ಓಡಿಸಿದ್ದೇವೆ, ಅವೆಲ್ಲಾ ಮರೆಯಲಾಗದ ನೆನಪುಗಳು ಎಂದರು.
ಅಪ್ಪು ಅವರಿಗೆ ಕಳ್ಳಬೇಟೆ ತಡೆ ಶಿಬಿರದಲ್ಲಿ ಬೆಲ್ಲದ ಟೀ ಮಾಡಿಕೊಟ್ಟಿದ್ದೇವೆ, ಜೊತೆಗೆ ಕಡಲೆಬೀಜ ಹುರಿದು ಕೊಟ್ಟಿರುವುದಾಗಿ ಹೇಳಿದ ಮಿಲ್ಟ್ರಿ ಮಾದೇವ, ಪುನೀತ್ ರಾಜ್ಕುಮಾರ್ ನನ್ನನ್ನು ಸರ್ ಎಂದು ಕರೆಯಬೇಡಿ ಎಂದಿದ್ದರು. ಬಳಿಕ ಅಣ್ಣಾ ಎಂದು ಕರೆಯಲು ಶುರು ಮಾಡಿದೆ, ಅದಕ್ಕೂ ಒಮ್ಮೊಮ್ಮೆ ತಕರಾರು ತೆಗೆದು ನನ್ನ ಕಾಡಿನ ಜ್ಞಾನ ಹೊಗಳಿದ್ದರು ಎಂದರು.
ಸಿನಿಮಾದಲ್ಲಿ ಕಂಡಿದ್ದ ಅಪ್ಪು ಅವರು ಎದುರಿಗೆ ಬಂದು ನಿಂತಾಗ ತುಂಬಾ ಖುಷಿಯಾಯಿತು. ಅವರೊಟ್ಟಿಗೆ ಫೋಟೋ ತೆಗೆಸಿಕೊಂಡೆ, ಸಿನಿಮಾಗಾಗಿ ಕಾಯುತ್ತಿದ್ದು, ನೋಡುತ್ತೇನೆ ಎಂದು ಮಿಲ್ಟ್ರಿ ಮಾದೇವ ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..