ಚಾಮರಾಜನಗರ: ಕಾಡುಗಳ್ಳ, ನರಹಂತಕ ವೀರಪ್ಪನ್ ಅಡಗು ತಾಣವಾಗಿದ್ದ ಈ ಪ್ರದೇಶ ಈಗ ಅಪ್ಪಟ ದೇಶಭಕ್ತರ ನೆಲೆ. ನಿವೃತ್ತ ಸೈನಿಕರು ಗ್ರಾಮದಲ್ಲೊಂದು ಸೈನಿಕ ಅಕಾಡೆಮಿ ಸ್ಥಾಪಿಸಿ ಅವರೇ ಖಡಕ್ ಮೇಷ್ಟ್ರಾಗಿದ್ದಾರೆ.
ಹನೂರು ತಾಲೂಕಿನ ಕಾಡಂಚಿನ ಗ್ರಾಮ ಮಾರ್ಟಳ್ಳಿ ಸೈನಿಕರ ಊರು. ಈ ಊರಿನಿಂದ ಹಾಲಿ ಸೇನೆಯಲ್ಲಿ 58 ಮಂದಿ ಹಾಗೂ ನಿವೃತ್ತ ಸೈನಿಕರು 65 ಮಂದಿ ಇದ್ದು 1965 ರ ಇಂಡೋ ಪಾಕ್ ಯುದ್ಧ, 1972 ರ ಬಾಂಗ್ಲಾ ವಿಮೋಚನೆ, ಆಪರೇಷನ್ ಬ್ಲೂ ಸ್ಟಾರ್, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ ಸೈನಿಕರು ಹಾಗು ಎರಡನೇ ಮಹಾಯುದ್ಧದಲ್ಲಿ ಮಡಿದ ಇಬ್ಬರು ಸೈನಿಕರ ಪತ್ನಿಯರೂ ಇಲ್ಲಿದ್ದಾರೆ.
ಗ್ರಾಮದ ಮಾಣಿಕ್ಯಂ ಎಂಬುವರು ಸೇನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಮಗ ಅರುಣ್ ಸೆಲ್ವ ಕುಮಾರ್ (ಸುಬೇದಾರ್) ಅವರನ್ನು ಸೇನೆ ಸೇರಿಸಿದ್ದಾರೆ. ನವೀನ್ ಕುಮಾರ್ ಹಾಗೂ ಜಗನ್ ಎಂಬ ಸಹೋದರರು ದೇಶ ಕಾಯುತ್ತಿದ್ದಾರೆ. ಹೀಗೆ ಸೇನೆಗೂ ಇಲ್ಲಿನ ಜನರಿಗೂ ಗಟ್ಟಿಯಾದ ಸಂಬಂಧವಿದ್ದು ಯುವಕರ ದೇಶಪ್ರೇಮಕ್ಕೆ ನಿವೃತ್ತ ಸೈನಿಕರು ನೀರೆರೆಯುತ್ತಿದ್ದಾರೆ.
ಅಕಾಡೆಮಿ ಸ್ಥಾಪನೆ-ಅಗ್ನಿವೀರರಾಗುವ ನಿರೀಕ್ಷೆ: ಮಾರ್ಟಳ್ಳಿ ಈ ಹಿಂದೆ ಭಾರತೀಯ ಸೇನೆಯ ಮದ್ರಾಸ್ (ಈರೋಡ್) ರೆಜಿಮೆಂಟ್ನ ಒಂದು ಭಾಗವಾಗಿತ್ತು. ಇದು ಕೊಳ್ಳೇಗಾಲ ಮತ್ತು ಮಲೆ ಮಹದೇಶ್ವರ ಬೆಟ್ಟದ ನಡುವಿನ ದೊಡ್ಡ ಹಳ್ಳಿ. ಕರ್ನಾಟಕ ರಾಜ್ಯದ ರಚನೆಯ ನಂತರ ಮಾರ್ಟಳ್ಳಿ ರಾಜ್ಯಕ್ಕೆ ಸೇರಿಕೊಂಡಿತು. ಕೆಲ ವರ್ಷಗಳ ಹಿಂದೆ ನಿವೃತ್ತ ಸೈನಿಕರು ಸೇರಿಕೊಂಡು ಟ್ರಸ್ಟ್ ರಚಿಸಿಕೊಂಡಿದ್ದು, ಈಗ ಸೈನಿಕ್ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಿದ್ದಾರೆ.
ಸೇನೆ ಸೇರ ಬಯಸುವ ಯುವಕರಿಗೆ ಸೇನೆಯಲ್ಲಿ ನೀಡಲಾಗುವ ಕಠಿಣ ತರಬೇತಿಯನ್ನು ನಿವೃತ್ತ ಸೈನಿಕರಾದ ಸುಬೇದಾರ್ ಮರಿಯಾ ಜೋಸೆಫ್, ಹವಲ್ದಾರ್ ಮಾಣಿಕ್ಯಂ, ಹವಲ್ದಾರ್ ಅರುಣ್ ಕುಮಾರ್ ಹಾಗೂ ಹವಾಲ್ದಾರ್ ಬಾಲನ್ ಅವರುಗಳು ಗ್ರಾಮದ 60ಕ್ಕೂ ಹೆಚ್ಚು ಪಿಯು, ಎಸ್ಎಸ್ಎಎಲ್ಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಅಗ್ನಿವೀರ ರ್ಯಾಲಿ ಹಾಸನದಲ್ಲಿ ನಡೆಯುತ್ತಿದ್ದು, ಭಾಗಿಯಾಗಿದ್ದ 28 ಮಂದಿಯಲ್ಲಿ 15 ಮಂದಿ ಮೆಡಿಕಲ್ ಹಾಗೂ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಅಗ್ನೀವೀರರಾಗಲು ಆಯ್ಕೆ ಆಗಿದ್ದಾರೆ.
ಎಕರೆ ಭೂಮಿ ಬಾಡಿಗೆಗೆ ಪಡೆದು ಸೇವೆ: ನಿವೃತ್ತ ಸೈನಿಕರು ನೀಡುವ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ನಿವೃತ್ತ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿರುವವರು ನೀಡಿದ ಹಣಕಾಸಿನ ಕೊಡುಗೆಯೊಂದಿಗೆ ಈ ಟ್ರಸ್ಟ್ ನಡೆಸಲಾಗುತ್ತಿದೆ. ಈ ಟ್ರಸ್ಟ್ ಸುಲ್ವಾಡಿ ಸರ್ಕಾರಿ ಆಸ್ಪತ್ರೆ ಬಳಿ ಒಂದು ಎಕರೆ ಭೂಮಿಯನ್ನು ರೂ. 2 ಲಕ್ಷ ರೂಪಾಯಿ ನೀಡಿ ಲೀಸ್ ಗೆ ಪಡೆದುಕೊಂಡಿದ್ದು, ಮಾರ್ಟಳ್ಳಿ ಜಾಗೇರಿ, ಕೌದಳ್ಳಿ, ಜಲ್ಲಿಪಾಲ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ತರಬೇತಿ ನೀಡುತ್ತಿದೆ.
ರಜೆಯ ಮೇಲೆ ಮಾರ್ಟಳ್ಳಿಗೆ ಬರುವ ಸೈನಿಕರು ಸಹ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಇಲ್ಲಿ ಮಿಲಿಟರಿ ಶಿಬಿರದಂತೆಯೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ ಎರಡು ತಾಸು ತರಬೇತಿಯನ್ನು ನೀಡಲಾಗುತ್ತಿದೆ. ಸೈನ್ಯದಲ್ಲಿ ಮಾಡುವಂತೆಯೇ ಯುವಕರ ಮಾನಸಿಕ ಕೌಶಲ್ಯಗಳನ್ನು ಸುಧಾರಿಸಲು ಪ್ರತಿದಿನ ಒಂದು ಗಂಟೆಯ ಬ್ರೀಫಿಂಗ್ ನಡೆಸುತ್ತಾರೆ.
ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್ಗೆ ಆಕಾಶ್ ಏರ್ಲೈನ್ಸ್ನ ಮೊದಲ ವಿಮಾನ