ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಉತ್ತರಾಧಿಕಾರಿ ಆಯ್ಕೆ ಸಂಬಂಧ ಭಕ್ತರು ಸಹಿ ಸಂಗ್ರಹದ ಮೂಲಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.
ಉತ್ತರಾಧಿಕಾರಿ ನೇಮಕ ಸಂಬಂಧ ಬೆಟ್ಟದಲ್ಲಿ ಬುಧವಾರ 18 ಊರುಗಳ ಮುಖಂಡರು ಸಭೆ ನಡೆಸಿ ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಸಂಬಂಧಿಕರಾಗಲಿ ಹಾಗೂ ಈಗಿರುವ ಗುರುಸ್ವಾಮಿಗಳ ಸಂಬಂಧಿಕರಾಗಲಿ ಮಠದ ಉತ್ತರಾಧಿಕಾರಿಯಾಗುವುದು ಬೇಡ ಎಂದು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಕಳೆದ ಅಕ್ಟೋಬರ್ನಲ್ಲೇ ಉತ್ತರಾಧಿಕಾರಿ ಕುರಿತು ಆಯ್ಕೆ ಸಮಿತಿ ರಚನೆಯಾಗಿದ್ದರೂ ಸರ್ವರೂ ಒಪ್ಪುವ ವಟುವನ್ನು ಆಯ್ಕೆ ಮಾಡದಿರುವುದರಿಂದ 18 ಗ್ರಾಮದ ಮುಖಂಡರೇ ಇಂದು ಸಭೆ ಸೇರಿ ಇಬ್ಬರೂ ಸ್ವಾಮೀಜಿಗಳ ಸಂಬಂಧಿಕರನ್ನು ಹೊರತುಪಡಿಸಿ ಪ್ರತಿ ಗ್ರಾಮದಲ್ಲೂ ಸಹಿ ಸಂಗ್ರಹಿಸಿ ಉತ್ತರಾಧಿಕಾರಿ ನೇಮಕಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಮಠದ ಗುರುಸ್ವಾಮೀಜಿ ನಾಗೇಂದ್ರ ಎಂಬ ಯುವಕನನ್ನು ಮಠದ ಉತ್ತರಾಧಿಕಾರಿಯನ್ನಾಗಿಸಬೇಕು ಎಂದು ವಿಲ್ ಮಾಡಿದ್ದನ್ನು ಈಟಿವಿ ಭಾರತ ಎಕ್ಸ್ಕ್ಲೂಸಿವ್ ವರದಿ ಮಾಡಿತ್ತು. ಬಳಿಕ, ಭಕ್ತರ ಒತ್ತಾಯದಿಂದಾಗಿ ಆ ವಿಲ್ ರದ್ದಾಗಿತ್ತು.