ಚಾಮರಾಜನಗರ: ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಚಿತ್ರೀಕರಣದ ವಿರುದ್ಧ ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಳೆದ ಬಾರಿ ಬೆಂಕಿಯಿಂದ ನಲುಗಿತ್ತು. ಈ ಬಾರಿ ಹೇಗಾದರೂ ಕಾಡನ್ನು ರಕ್ಷಿಸಲೇಬೇಕು ಎಂದು ಸಿಬ್ಬಂದಿ ಶ್ರಮ ಪಡುತ್ತಿರುವ ಸಮಯದಲ್ಲಿ ಚಿತ್ರೀಕರಣ ನಡೆಸುತ್ತಿರುವುದು ಸರಿಯಲ್ಲ. ಮಳೆಗಾಲದಲ್ಲಿ ಬಂದಿದ್ದರೆ ನಮ್ಮ ಅಭ್ಯಂತರವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಡನ್ನು ಮೊದಲು ಉಳಿಸಿ ಬಳಿಕ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವತ್ತ ಸರ್ಕಾರ ಮುಂದಾಗಬೇಕು. ರಜಿನಿಕಾಂತ್ ಮೊದಲು ಮಧುಮಲೈಯಲ್ಲಿ ನಡೆಯುತ್ತಿರುವ ರಾತ್ರಿ ಸಫಾರಿಯನ್ನು ತಮಿಳುನಾಡು ಸರ್ಕಾರಕ್ಕೆ ಒತ್ತಡ ಹೇರಿ ನಿಲ್ಲಿಸಬೇಕು ಎಂದು ಹೂವರ್ ಒತ್ತಾಯಿಸಿದ್ದಾರೆ.
ನಾಲ್ಕು ವಲಯಗಳಲ್ಲಿ ಚಿತ್ರೀಕರಣ: ರಜಿನಿಕಾಂತ್ ಮತ್ತು ಬೇರ್ ಗ್ರಿಲ್ಸ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ, ಜಿ.ಎಸ್.ಬೆಟ್ಟ, ಮದ್ದೂರು ಹಾಗೂ ಮೂಲೆಹೊಳೆ ಅರಣ್ಯ ವಲಯಗಳಲ್ಲಿ 6 ತಾಸು ಚಿತ್ರೀಕರಣ ನಡೆಯಲಿದ್ದು, ಈ ವಲಯಗಳಲ್ಲಿ ರಸ್ತೆ, ಸೇತುವೆ, ಕೆರೆ, ದಟ್ಟ ಕಾನನದ ಸ್ಥಳಗಳನ್ನು ಆಯ್ದುಕೊಂಡಿದ್ದಾರೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.