ಚಾಮರಾಜನಗರ : ವ್ಯಕ್ತಿಯೋರ್ವ ಮಹಿಳೆಯನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ನಡೆದಿದೆ. ಹನೂರು ತಾಲೂಕಿನ ನಾಗಮಲೆ ಗ್ರಾಮದ ಲಕ್ಷ್ಮೀ(35) ಮೃತರು. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುನಿರಾಜ್ ಕೃತ್ಯ ಎಸಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೂಲತಃ ತಮಿಳುನಾಡಿನ ಪೆನ್ನಾಗರಂ ನಿವಾಸಿಯಾದ ಲಕ್ಷ್ಮೀ ಅವರನ್ನು ಕಳೆದ 7 ತಿಂಗಳ ಹಿಂದೆ ನಾಗಮಲೆ ಗ್ರಾಮದ ರಮೇಶ್ ಎಂಬಾತ ವಿವಾಹ ಮಾಡಿಕೊಂಡು ನಾಗಮಲೆಗೆ ಕರೆತಂದಿದ್ದಾನೆ. ಮಂಗಳವಾರ ರಮೇಶ್ ಬೇರೆ ಊರಿಗೆ ಹೋಗಿದ್ದಾಗ ಇಲ್ಲಿಗೆ ಆಗಮಿಸಿದ್ದ ಮುನಿರಾಜು ಲಕ್ಷ್ಮಿಯನ್ನು ಕೊಂದು ಬಳಿಕ ತಾನೂ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಕೊ ಫೇಸ್‌ಬುಕ್ ಲೈವ್!: ಲಕ್ಷ್ಮೀಯನ್ನು ಹತ್ಯೆ ಮಾಡಿ ಫೇಸ್ ಬುಕ್ ಲೈವ್ ಮಾಡಿರುವ ಮುನಿರಾಜು, ತನ್ನನ್ನು ಕೊಲೆಗಾರನನ್ನಾಗಿಸಿದೆಯಲ್ಲಾ ಲಕ್ಷ್ಮೀ.? ತಾನೇ ನಿನ್ನನ್ನು ಕೊಲೆ ಮಾಡಿದೆನೆಲ್ಲಾ.? ನಿನ್ನ ರಕ್ತವನ್ನು ಕಾಣಲು ನನ್ನಿಂದ ಆಗುತ್ತಿಲ್ಲ ಎಂದು ಅಳುತ್ತಾ ವಿಡಿಯೋ ಮಾಡಿದ್ದಾನೆ. ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನು, ಜಿಲ್ಲೆಯಲ್ಲಿ ನಡೆದ ಇತರೆ ಘಟನಾವಳಿಗಳು ಹೀಗಿವೆ..
ಬಾಲಕಿಯಿಂದ ಮಗುವಿಗೆ ಜನ್ಮ: 17 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಈಕೆಯನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿತ್ತು. 26 ವರ್ಷದ ಯುವಕ ಜೈಲುಪಾಲಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಅಪಘಾತ- ಐವರಿಗೆ ಗಾಯ: ಕಾರುಗಳ ನಡುವೆ ಅಪಘಾತ ನಡೆದು ಐವರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿ ಗೇಟ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಕೇರಳ ಮೂಲದ ವಿಜಯಲಕ್ಷ್ಮಿ, ಅನಿತಾ, ಗೋಪಿನಾಥ್ ಹಾಗೂ ಬೆಂಗಳೂರು ಮೂಲದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು 108 ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂರು ಮನೆಗೆ ಕನ್ನ: ಒಂದೇ ದಿನ ಮೂರು ಮನೆಗಳಿಗೆ ಕನ್ನ ಹಾಕಿರುವ ಖದೀಮರು ಮನೆಗಳಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸಾಣೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಂಗರಾಜು, ಗಿರಿತಿಮ್ಮೆಗೌಡ ಮತ್ತು ನಂದಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ನಂದಕುಮಾರ್ ಅವರ ಮನೆಯಲ್ಲಿ ಹಣ ಮತ್ತು ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಇನ್ನುಳಿದ ಎರಡು ಮನೆಯವರು ಬೆಂಗಳೂರಿನಲ್ಲಿದ್ದಾರಂತೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬಡ್ಡಿ ಹಣ ಪಾವತಿಸಲು ವಿಳಂಬ.. ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್