ಚಾಮರಾಜನಗರ: ಕೊರೊನಾ ಭೀತಿಯಿಂದ ದೇಶದಲ್ಲಿ ಕಟ್ಟೆಚ್ಚರ ವಹಿಸಿದ್ದು, ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಕ್ಕೆ ಬಂದ ನೆರೆ ರಾಜ್ಯದ ಭಕ್ತರು ಪರದಾಡುವಂತಾಗಿದೆ.
ಪ್ರಸಿದ್ಧ ತೀರ್ಥ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರನ್ನು ನಿರ್ಬಂಧಿಸಿ ಬೀಗ ಹಾಕಲಾಗಿದ್ದು, ದೇಗುಲದ ಒಳಾವರಣದಲ್ಲಿ ಎಂದಿನಂತೆ ಪೂಜೆ-ಪುನಸ್ಕಾರ ನಡೆದಿದೆ. ಪುಣಜನೂರಿನ ತಮಿಳುನಾಡು ಗಡಿಯಲ್ಲಿ ತಮಿಳುನಾಡು ಸರ್ಕಾರವು ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿರುವುದರಿಂದ ವಾಹನಗಳ ಓಡಾಟ ವಿರಳವಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಬಂಡೀಪುರ, ಮೂಳೆಹೊಳೆ ಭಾಗದಲ್ಲಿ ವಾಹನಗಳು ಅತೀ ವಿರಳವಾಗಿದ್ದವು.
ಬೆಟ್ಟಕ್ಕೆ ಬಂದಿದ್ದ ಭಕ್ತರನ್ನು ಕೌದಳ್ಳಿ ಮತ್ತು ಪಾಲಾರ್ನಲ್ಲೇ ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಇನ್ನು, ಅಂತರ್ ರಾಜ್ಯ ಸರ್ಕಾರಿ, ಖಾಸಗಿ ಬಸ್ಗಳನ್ನು ಸ್ಥಗಿತಗೊಳಿಸಿರುವುದರಿಂದ ನೆರೆ ರಾಜ್ಯಕ್ಕೆ ತೆರಳಬೇಕಾದ ಜನರು ಪರದಾಡಿದರು. ತಾಳವಾಡಿಗೆ ತೆರಳಬೇಕಾದವರು ರಾಜ್ಯದ ಗಡಿವರೆಗೆ ಸಾರಿಗೆ ಸಂಸ್ಥೆ ಬಸ್ನಲ್ಲಿ ತೆರಳಿ ಅಲ್ಲಿಂದ ಸತ್ಯಮಂಗಲಂ, ಕೊಯಮತ್ತೂರಿಗೆ ತೆರಳಬೇಕಾದವರು ಪಡಿಪಾಟಲು ಪಟ್ಟರು.