ಕೊಳ್ಳೇಗಾಲ(ಚಾಮರಾಜನಗರ): ಕಡಲೆಕಾಯಿ ಸಾಗಿಸುವ ನೆಪದಲ್ಲಿ ಅಕ್ರಮವಾಗಿ 1,750 ಕೆಜಿ ಮಾಗಳಿ ಬೇರನ್ನು ಸಾಗಿಸುತ್ತಿದ್ದ ಐನಾತಿ ಖದೀಮರನ್ನು ಎಸ್ಎಂಎಫ್ ಬಂಧಿಸಿದೆ.
ತಮಿಳುನಾಡು ಮೂಲದ ಕುಳತರಂಪಟ್ಟಿ ಗ್ರಾಮದ ಸೆಂಥಿಲ್ ಕುಮಾರ್ (43), ಮುರಗೇಶ್(41)ಬಂಧಿತ ಆರೋಪಿಗಳಾಗಿದ್ದಾರೆ. ಇವರು ತಾಲೂಕಿನ ಜಾಗೇರಿ ಗ್ರಾಮದ ಶಾಂತಿನಗರದ ಸಮೀಪ ಅಕ್ರಮವಾಗಿ ವಾಹನವೊಂದರಲ್ಲಿ ಬೃಹತ್ ಪ್ರಮಾಣದ ಮಾಗಳಿ ಬೇರನ್ನು ತಮಿಳುನಾಡಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಎಂಬ ವಿಚಾರ ತಿಳಿದಿತ್ತು. ಎಸ್ಎಂಎಫ್ ಸಬ್ ಇನ್ಸ್ಪೆಕ್ಟರ್ ಮುದ್ದುಮಾದೇವ ತಂಡ ಸ್ಥಳಕ್ಕೆ ದೌಡಾಯಿಸಿ ಹೊಂಚು ಹಾಕಿ ಕಾದಿದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬಂದ ವಾಹನದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವಾಹನದಲ್ಲಿದ್ದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಒಟ್ಟು 47 ಚೀಲಗಳಲ್ಲಿ ಕಡಲೆಕಾಯಿ ತುಂಬಿದ 1750 ಕೆಜಿ ಮಾಗಳಿ ಬೇರಿನ ಚಿಕ್ಕ- ಚಿಕ್ಕ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಎಸ್ಎಂಎಫ್ ಸಿಬ್ಬಂದಿಯಾದ ಲೋಕೇಶ್, ಶಂಕರ್, ಬಸವರಾಜು, ರಾಮಚಂದ್ರ, ತಕ್ಕಿವುಲ್ಲಾ ಮತ್ತಿತರರಿದ್ದರು.