ಚಾಮರಾಜನಗರ: ಲಾಕ್ಡೌನ್ ಆರಂಭವಾದ ದಿನಗಳಿಂದ ಕಾಡುಹಂದಿಗಳ ಉಪಟಳ ಹೆಚ್ಚಾಗಿದ್ದು, ರೈತರು ಆನೆ, ಹುಲಿಗಳನ್ನ ಕಂಡಷ್ಟೇ ಹಂದಿಗಳ ಕಾಟಕ್ಕೆ ಬೆಚ್ಚಿ ಬೀಳುತ್ತಿದ್ದಾರೆ.
ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಲಾಕ್ಡೌನ್ ಯಶಸ್ವಿಯಾಗಿ ಆಗುತ್ತಿರುವುದರಿಂದ ಜನರು ಹಾಗೂ ವಾಹನ ಸಂಚಾರ ವಿರಳವಾಗಿದೆ. ಜನರ ಓಡಾಟದ ಸದ್ದು ಗದ್ದಲವಿಲ್ಲದಿರುವುದರಿಂದ ಜಮೀನಿಗಳಿಂದ ಗ್ರಾಮಗಳತ್ತ ಕಾಡುಹಂದಿಗಳು ಲಗ್ಗೆ ಇಡುತ್ತಿವೆ. ಮಧ್ಯಾಹ್ನದ ವೇಳೆ ಗ್ರಾಮದ ರಸ್ತೆಗಳಲ್ಲಿ ಕಾಡುಹಂದಿಗಳ ಹಿಂಡು ಕಾಣುವುದು ಸಾಮಾನ್ಯವಾಗಿರುವುದರಿಂದ ಜನರು ಓಡಾಡಲು ಬಿಚ್ಚಿಬೀಳುತ್ತಿದ್ದಾರೆ ಎಂದು ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರೈತ ಪ್ರಕಾಶ್ ತಿಳಿಸಿದ್ದಾರೆ.
ತೋಟದ ಮನೆಯಲ್ಲಿರುವವರು ಸಂಜೆ ಡೈರಿಗಳಿಗೆ ಹಾಲು ಹಾಕಲು ಹೋಗವವರು ಹೆದರುತ್ತಿದ್ದಾರೆ. ಸಂಜೆ ಹೊತ್ತು ಜಮೀನುಗಳಿಗೆ ಬರುತ್ತಿದ್ದ ಹಂದಿಗಳು ಈಗ ಹಗಲಲ್ಲೇ ರಸ್ತೆಯಲ್ಲೇ ನಿಂತಿರುತ್ತವೆ. ಗುರುವಾರ ಹನೂರು ತಾಲೂಕಿನ ಉದ್ದನೂರು ಗ್ರಾಮದ ರೈತ ಪುಟ್ಟಸ್ವಾಮಿ ಎಂಬವವರು ಜಮೀನಿಗೆ ತೆರಳುವಾಗ ಕಾಡುಹಂದಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಪುಟ್ಟಸ್ವಾಮಿ ಬಲಗಾಲು ಗಾಯಗೊಂಡು ಹನೂರಿನ ಖಾಸಗಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.