ಚಾಮರಾಜನಗರ: ಲಾಕ್ಡೌನ್ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಬೆಳೆದ ಹೂ, ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರಸ್ತೆಗೆ ಸುರಿಯುತ್ತಿದ್ದಾರೆ. ಮತ್ತೆ ಕೆಲವರು ಜಮೀನಿನಲ್ಲೇ ಬಿಟ್ಟು ಬಿಡುತ್ತಿದ್ದಾರೆ. ಇತ್ತ ಪಪ್ಪಾಯಿ ಬೆಳೆದವರ ಪರಿಸ್ಥಿತಿಯೂ ಅದೇ ಆಗಿದೆ.
ಬೇಸಿಗೆಯಲ್ಲಿ ಭಾರೀ ವಹಿವಾಟು ಕಾಣುತ್ತಿದ್ದ ಪಪ್ಪಾಯಿ ಹಣ್ಣು ಮಜಬೂತಾಗಿ ಫಲ ಬಂದಿದ್ದರೂ ಕಿಸೆ ಮಾತ್ರ ತುಂಬದಂತಾಗಿದೆ. ಹಣ್ಣು ಬಂದರೂ ಹಣ ಬರದ ಸ್ಥಿತಿ ನಿರ್ಮಾಣವಾಗಿದೆ. ಹನೂರು, ಗುಂಡ್ಲುಪೇಟೆ, ಚಾಮರಾಜನಗರ ತಾಲೂಕಿನ ಭಾಗದಲ್ಲಿ ಪಪ್ಪಾಯಿ ಹೆಚ್ಚು ಬೆಳೆಯಲಿದ್ದು, ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಕೊರೊನಾ ದೊಡ್ಡ ಪೆಟ್ಟನ್ನೇ ನೀಡಿದೆ.
ಸದ್ಯದ ಸ್ಥಿತಿ ಕುರಿತು ಹನೂರಿನ ಪಪ್ಪಾಯಿ ಬೆಳೆಗಾರ ಶ್ರೀನಿವಾಸ ಪ್ರತಿಕ್ರಿಯಿಸಿ, 5 ಎಕರೆಯಲ್ಲಿ ರೆಡ್ ಲೇಡಿ ಥೈವಾನ್ ತಳಿ ಪರಂಗಿ ಹಣ್ಣನ್ನು ಬೆಳೆದಿದ್ದೆ. ಉತ್ತಮವಾಗಿ ಇಳುವರಿ ಬಂದಿದೆ. ದೆಹಲಿಗೆ ಈ ಹಣ್ಣುಗಳು ರವಾನೆಯಾಗುತ್ತಿತ್ತು. ಸಾಮಾನ್ಯವಾಗಿ ಕೆ.ಜಿಗೆ 25- 30ರೂ. ಇರುತ್ತಿತ್ತು. ಈಗ, 3-4 ರೂಪಾಯಿ ಇದೆ. ಲಕ್ಷಾಂತರ ರೂಪಾಯಿ ಸಾಲ ಮೈಮೇಲೆ ಬಿದ್ದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು, ಕೆಲವೆಡೆ ಅಕ್ಕಪಕ್ಕದ ಊರುಗಳಿಂದ ಬರುತ್ತಿದ್ದ ಕೂಲಿಯಾಳುಗಳು ಕೂಡ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಹೂವು ಬೆಳೆಗಾರರ ಬದುಕು ಬಾಡುತ್ತಿರುವಂತೆ ಪಪ್ಪಾಯಿ ಬೆಳೆಗಾರರ ಜೀವನ ಪಾಪರ್ ಆಗುವ ಸ್ಥಿತಿ ನಿರ್ಮಾಣವಾಗಿದೆ.
ಗುಂಡ್ಲುಪೇಟೆಯ ಕೆಲವೆಡೆ ರೈತರು ಪಪ್ಪಾಯಿ ಕಟಾವು ಮಾಡುವ ಗೋಜಿಗೆ ಹೋಗದೇ ಗಿಡದಲ್ಲೇ ಹಾಗೆ ಬಿಟ್ಟಿದ್ದಾರೆ. ಇಂತಹುದೇ ಸ್ಥಿತಿ ಕಲ್ಲಂಗಡಿ, ಬಾಳೆ ಬೆಳೆದವರ ಪಾಡಾಗಿದೆ.