ಚಾಮರಾಜನಗರ : ಗ್ರಾಹಕರು ತಮ್ಮ ಮನೆಗಳ ವಿದ್ಯುತ್ ಬಿಲ್ ಪಾವತಿಸದ ಸಂದರ್ಭ, ಲೈನ್ಮೆನ್ಗಳು ಸಂಪರ್ಕ ಕಡಿತಗೊಳಿಸದಿದ್ದರೇ ಅವರನ್ನು ಸಸ್ಪೆಂಡ್ ಮಾಡಲು ಚೆಸ್ಕಾಂ ಆಡಳಿತ ಮಂಡಳಿ ನಿರ್ಧರಿಸಿದೆ.
ಗ್ರಾಹಕರು 3-4 ತಿಂಗಳುಗಳಿಂದ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಕಟ್ಟಿಸಿಕೊಳ್ಳಲು ಚೆಸ್ಕಾಂ ಸಿಬ್ಬಂದಿಯೊಂದಿಗೆ ಲೈನ್ಮೆನ್ಗಳು ಹೋಗಬೇಕಿದೆ. ಗ್ರಾಹಕರು ಬಾಕಿ ಮೊತ್ತ ಪಾವತಿಸದಿದ್ದರೆ ವಿದ್ಯುತ್ ಕಂಬದಿಂದ ಮನೆಗೆ ಸಂಪರ್ಕವಿರುವ ಮುಖ್ಯ ಸಂಪರ್ಕವನ್ನು ಕಟ್ ಮಾಡಬೇಕಿದೆ.
ಮಾಡದಿದ್ರೆ ಸಿಬ್ಬಂದಿ ಅಮಾನತು ಮಾಡಲು ಚೆಸ್ಕಾಂನ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ವಿದ್ಯುತ್ ಬಾಕಿ ಪಾವತಿಸದ ಗ್ರಾಹಕರ ಮನೆಯ ಮೀಟರ್‌ನಲ್ಲಿ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಚೆಸ್ಕಾಂ, ಈಗ ವಿದ್ಯುತ್ ಕಂಬದಿಂದಲೇ ಮುಖ್ಯ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ಉದಾ : ವಠಾರವೊಂದರಲ್ಲಿ 4 ರಿಂದ 5 ಮನೆಗಳಿವೆ. ಅವುಗಳಿಗೆ ಪ್ರತ್ಯೇಕ ವಿದ್ಯುತ್ ಮೀಟರ್ ಇರಲಿದೆ. ಅದರಲ್ಲಿ ನಾಲ್ವರು ಬಿಲ್ ಪಾವತಿಸಿ, ಒಬ್ಬರು ಬಿಲ್ ಪಾವತಿಸದಿದ್ರೆ ಪಾವತಿಸದ ಮೀಟರ್‌ನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು.
ಆದರೆ, ಈಗ ನಾಲ್ವರು ಬಿಲ್ ಪಾವತಿಸಿ, ಒಬ್ಬ ಪಾವತಿಸದಿದ್ದರೆ ವಿದ್ಯುತ್ ಕಂಬದಿಂದ ಮುಖ್ಯ ಸಂಪರ್ಕವನ್ನೇ ಕಡಿತಗೊಳಿಸಲಾಗುವುದು. ಬಿಲ್ ಪಾವತಿಸಿದವರ ಮನೆಗಳನ್ನೂ ಕತ್ತಲು ಮಾಡುವ ಅನಾಗರಿಕ ಕಾನೂನನ್ನು ಚೆಸ್ಕಾಂ ಆಡಳಿತ ರೂಪಿಸಿದೆ.
ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರಿ, ಖಾಸಗಿ ಗಣಿಗಾರಿಕೆ ಕಚೇರಿಗಳು ಹಾಗೂ ವಿವಿಧ ವಾಣಿಜ್ಯ ಸಂಘ-ಸಂಸ್ಥೆಗಳಿಂದ ಬಾಕಿ ಹಣ ವಸೂಲಿಗೆ ಕ್ರಮಕೈಗೊಳ್ಳದ ಚೆಸ್ಕಾಂ ಆಡಳಿತ ಮಂಡಳಿ, ತನ್ನ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಎನ್ನುವ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿರುವುದರ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ರೈತ ಏನ್ ಮಾಡಿದ ನೋಡಿ...!