ಚಾಮರಾಜನಗರ: ಕೊರೊನಾ ಭೀತಿಯಲ್ಲಿರುವ ಗುಂಡ್ಲುಪೇಟೆಯಲ್ಲೀಗ ಚಿರತೆ ಭೀತಿಯೂ ಆವರಿಸಿ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಕಳೆದ ಕೆಲವು ದಿನಗಳಿಂದ ಜಾಕೀರ್ ಹುಸೇನ್ ನಗರ, ಮಹಾದೇವಪ್ರಸಾದ ನಗರ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಆದರೆ, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಬಳಿ ಚಿರತೆ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಗುಂಡ್ಲುಪೇಟೆ ಆರ್ ಎಫ್ಒ ಲೋಕೇಶ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಸಾರ್ವಜನಿಕ ಆಸ್ಪತ್ರೆ ಬಳಿ ಚಿರತೆ ಬಂದಿರುವುದು ನಿಜ. ಆದರೆ, ಜಾಕೀರ್ ಹುಸೇನ್ ನಗರದಲ್ಲಿ ಹಸು ಕೊಂದಿರುವುದು ಚಿರತೆ ಎಂದು ದೃಢಪಟ್ಟಿಲ್ಲ. ಈಗಾಗಲೇ ಚಿರತೆ ಸೆರೆಗೆ ಬೋನಿಟ್ಟು ಕ್ಯಾಮರಾ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕಲ್ಲುಕ್ವಾರಿ, ಕಾಡಂಚಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಪಟ್ಟಣದಲ್ಲೇ ಕಾಣಿಸಿಕೊಂಡಿದ್ದು, ಅದರಲ್ಲೂ ಆಸ್ಪತ್ರೆ ಬಳಿ ಕಾಣಿಸಿಕೊಂಡಿರುವುದು ಹೆಚ್ಚು ಆತಂಕಕಾರಿಯಾಗಿದೆ.