ಚಾಮರಾಜನಗರ: ಉತ್ತಮ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೀತಿಗೆಟ್ಟ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಪ್ರತಿರೂಪಗಳಾಗಿವೆ. ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಜಾತಿ ರಾಜಕಾರಣ, ಹತೋಟಿ ಇಲ್ಲದ ಭ್ರಷ್ಟಾಚಾರ ನಡೆದ ಕಾರಣ ಸಮೃದ್ದ ಕರ್ನಾಟಕದಲ್ಲಿ ಜನರು ಬಡತನ, ಅಸಮಾನತೆ, ನಿರುದ್ಯೋಗ ಸಮಸ್ಯೆಗಳಿಂದ ನರಳುತ್ತಿರುವುದನ್ನು ಕಾಣುತ್ತಿದ್ದೇವೆ. ಇದರ ಜೊತೆಗೆ ಸಮಾಜದಲ್ಲಿ ಸಾರ್ವಜನಿಕ ಮೌಲ್ಯಗಳು ಸತ್ತು ಹೋಗಿವೆ.
2019ರ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷ ಸ್ಥಾಪನೆಯಾದ ದಿನದಿಂದ ರಾಜ್ಯಾದ್ಯಂತ ಸಂಘಟನೆ ಮಾಡುವ ಜೊತೆಗೆ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಕೋವಿಡ್-19 ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿದ ಭ್ರಷ್ಟಾಚಾರವನ್ನು ಬಯಲಿಗೆಳೆದ ಏಕೈಕ ಪಕ್ಷವೆಂದರೆ ಅದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಂದು ಅವರು ಹೇಳಿದರು.