ಚಾಮರಾಜನಗರ: ರಾಜ್ಯದ ಪ್ರಸಿದ್ಧ ದೇಗುಲಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕೊರೊನಾ ಪರಿಣಾಮ ಬೀರಿದೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ.
ಬೆಂಗಳೂರು, ಮಂಡ್ಯ ಸೇರಿದಂತೆ ತಮಿಳುನಾಡಿನಿಂದಲೂ ಕ್ಷೇತ್ರಕ್ಕೆ ಪ್ರತಿದಿನ 8-10 ಸಾವಿರ ಮಂದಿ ಆಗಮಿಸುತ್ತಿದ್ದರು. ವಾರಾಂತ್ಯದಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಆದರೀಗ ಆ ಸಂಖ್ಯೆ 1,500-2,000ಕ್ಕೆ ಇಳಿದಿದ್ದು ಕ್ಷೇತ್ರದ ಆವರಣ, ವಸತಿ ಗೃಹಗಳು ಜನರ ಓಡಾಟವಿಲ್ಲದೆ ಖಾಲಿ ಖಾಲಿಯಾಗಿವೆ. ಇದೇ 21 ರಿಂದ 26 ರವರೆಗೆ ನಡೆಯಬೇಕಿದ್ದ ಯುಗಾದಿ ಜಾತ್ರೆ ಮತ್ತು ರಥೋತ್ಸವ ರದ್ದುಗೊಂಡಿದ್ದು, ಭಕ್ತರು ತಂಗಲು ನಿರ್ಬಂಧ ಹೇರಲಾಗಿದೆ. ತಮಿಳುನಾಡಿನ ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ರವಾನಿಸಲಾಗಿದ್ದು, ಅಲ್ಲಿನ ಭಕ್ತರಿಗೆ ತಿಳಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.