ಚಾಮರಾಜನಗರ: ಫಿಲಿಪಿನ್ಸ್ ದೇಶದಲ್ಲೂ ಮಾರಕ ಕಾಯಿಲೆ ಕೊರೊನಾ ವೇಗವಾಗಿ ಹರಡುತ್ತಿರುವುದರಿಂದ ಮನೆಯಿಂದ ಯಾರೂ ಹೊರಬರದಂತೆ ಘೋಷಿಸಿದ ಕಾರಣ ರಾಜ್ಯದ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕೊಳ್ಳೆಗಾಲದ ರಶ್ಮಿ ಎಂಬ ವಿದ್ಯಾರ್ಥಿನಿ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಫಿಲಿಪಿನ್ಸ್ ನಲ್ಲಿ 180 ಮಂದಿ ಸೋಂಕಿತರಿದ್ದು, ನಮ್ಮನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಇದಕ್ಕಿಂತ ಜೈಲುವಾಸವೇ ಉತ್ತಮ. ಫಿಲಿಪಿನ್ಸ್ ಆರು ತಿಂಗಳ ಕಾಲ ವಿಪತ್ತು ಘೋಷಣೆ ಮಾಡಿದೆ. ನಮ್ಮ ದೇಶಗಳಿಗೆ ಹೋಗಲು 72 ಗಂಟೆಗಳ ಕಾಲಾವಕಾಶ ನೀಡಿದೆ. ಆದರೆ, ಭಾರತ ಸರ್ಕಾರ ವಿಮಾನಗಳನ್ನು ತಡೆಹಿಡಿದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಾವೆಲ್ಲಾ ವಿಮಾನದ ಟಿಕೆಟ್ ಬುಕ್ ಮಾಡಿದ್ದೆವು. ಆದರೆ ಭಾರತ ಸರ್ಕಾರ ಏಕಾಏಕಿ ವಿಮಾನ ಟಿಕೆಟ್ ರದ್ದುಗೊಳಿಸಿದೆ. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಫಿಲಿಪಿನ್ಸ್ನಲ್ಲಿ ಪರದಾಡುತ್ತಿದ್ದಾರೆ. ದಯಮಾಡಿ ನಮನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಫಿಲಿಪಿನ್ಸ್ ನಲ್ಲಿ ಮೆಡಿಕಲ್ ಓದುತ್ತಿರುವ ರಶ್ಮಿ ಕೇಳಿಕೊಂಡಿದ್ದಾರೆ.
ಮಕ್ಕಳನ್ನು ವಾಪಸ್ ಕರೆಯಿಸಿಕೊಳ್ಳಿ : ಪಾಲಕರ ಅಳಲು
ಈ ಕುರಿತು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಶ್ಮಿಯ ತಂದೆ ಸಿದ್ದೇಗೌಡ, ನಮ್ಮ ಮಗಳನ್ನ ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಎರಡು ವರ್ಷಗಳಿಂದ ರಶ್ಮಿ ಫಿಲಿಪಿನ್ಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ಭೀತಿ ಹಿನ್ನೆಲೆ ಭಾರತಕ್ಕೆ ಬರಲು ಸಿದ್ದವಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಭಾರತ ಸರ್ಕಾರ ವಿಮಾನಯಾನವನ್ನ ರದ್ದುಗೊಳಿಸಿದೆ. 72 ಗಂಟೆಯೊಳಗೆ ದೇಶದಿಂದ ಹೊರ ಹೋಗಲು ಫಿಲಿಪಿನ್ಸ್ ದೇಶ ಅವಕಾಶ ನೀಡಿದೆ ಎಂದರು.