ಕೊಳ್ಳೇಗಾಲ: ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಹಿನ್ನಲೆ ಇಂದು ಬೆಳ್ಳಗೆ 9.30 ರಿಂದ ಸಂಜೆ 4ರವರೆಗೆ ಕೊಳ್ಳೇಗಾಲ ನಗರಸಭೆ 100 ಮೀಟರ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶಿಸಿದ್ದಾರೆ.
ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯುತ್ತಿರುವ ಹಿನ್ನಲೆ ಸಂಬಂಧ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶಿಸಿದ್ದು, ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಹಾಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ವಿಲ್ಲದ ಕಾರಣ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದ್ದು, ಜಿದ್ದಾಜಿದ್ದಿನಿಂದ ಕೂಡಿರುತ್ತದೆ.
ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಸಮುದಾಯಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ಪಂಗಡಕ್ಕೆ ಮೀಸಲಾಗಿತ್ತು. ಆದರೆ ಎರಡು ನಗರಸಭೆಯಲ್ಲಿ ಬಹುಮತ ಇರುವ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಕೈ ತಪ್ಪಿ ಬಿಜೆಪಿ ಪಾಲಾಗಿತ್ತು. ಇದನ್ನು ಗಮನಿಸಿದ ಜೆಡಿಎಸ್ ಪಕ್ಷ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಪ್ರಶ್ನಿಸಿ ಹೈಕೋರ್ಟ್ ಮೊರೆಹೋಗಿತ್ತು. ಮೊದಲು ಹೈಕೋರ್ಟ್ ಪ್ರಕರಣವನ್ನು ವಿಚಾರಣೆ ನಡೆಸಿ ಅದೇ ಸಮುದಾಯಕ್ಕೆ ಮೀಸಲು ಪ್ರಕಟಿಸಿ ಆದೇಶ ಹೊರಡಿಸಿತ್ತು. ಆದರೆ ಜೆಡಿಎಸ್ ಪಕ್ಷ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಅ.29 ರಂದು ಚುನಾವಣೆ ನಡೆಸಬಹುದು ಎಂದು ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಇಂದು ಚುನಾವಣೆ ನಡೆಯಲಿದೆ. ಆದರೆ ಯಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎಂದು ಫಲಿತಾಂಶ ಮಾತ್ರ ಪ್ರಕಟಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದು, ಸದ್ಯಕ್ಕೆ ಯಾರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಂಬುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಚುನಾವಣೆ ನಡೆಸಿದ ಬಳಿಕ ಇಡೀ ಕಡತವನ್ನು ಹೈಕೋರ್ಟ್‍ಗೆ ಸಲ್ಲಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್ ಕಡತ ಸಲ್ಲಿಸಿದ ಬಳಿಕ ಮತ್ತೆ ಕೋರ್ಟ್‍ನಲ್ಲಿ ಮರು ವಿಚಾರಣೆ ನಡೆಯಲಿದೆ.