ಚಾಮರಾಜನಗರ: ಕೊರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಚಾಮರಾಜನಗರ ಗಡಿಭಾಗದಲ್ಲಿರುವ ಮೂಕನಪಾಳ್ಯ ಗ್ರಾಮದ ಜನರು ಸಾಮೂಹಿಕ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಈ ಕುರಿತು ಮಂಗಳವಾರ ರಾತ್ರಿ ಡಂಗೂರ ಸಾರಿಸಿರುವ ಗ್ರಾಮದ ಮುಖಂಡರು ಬೆಂಗಳೂರು, ತಮಿಳುನಾಡಿನಿಂದ ಗ್ರಾಮಕ್ಕೆ ಬಂದಿರುವವರು ಮೊದಲು ಕೋವಿಡ್ ಟೆಸ್ಟ್ ಮಾಡಿಸಬೇಕು. ಬಳಿಕ, ಗ್ರಾಮದ ಪ್ರತಿಯೊಬ್ಬರೂ ಕೊರೊನಾ ಟೆಸ್ಟ್ ಮಾಡಿಸಲು ಈಗಾಗಲೇ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸರ್ಕಾರವನ್ನೇ ನಾಚಿಸುವಂತೆ ಸ್ವಯಂ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ ಇಲ್ಲಿನ ಗ್ರಾಮಸ್ಥರು. ತಪಾಸಣೆಗೆ ಬರುವ ಡಾಕ್ಟರ್, ನರ್ಸ್, ಆಶಾ ಕಾರ್ಯಕರ್ತೆಯರ ಜೊತೆ ಸಂಯಮದಿಂದ ನಡೆದುಕೊಂಡು, ಆರೋಗ್ಯ ತಪಾಸಣೆಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಜೈಲು ಗ್ಯಾರಂಟಿ ಎಂದು ಗ್ರಾಮದ ಮುಖಂಡರು ಊರಿನ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಗ್ರಾಮದಲ್ಲಿ ಲಂಬಾಣಿ ಭಾಷಿಕರೇ ಹೆಚ್ಚಿರುವುದರಿಂದ ಕನ್ನಡ ಮತ್ತು ಲಂಬಾಣಿ ಭಾಷೆಯಲ್ಲಿ ಡಂಗೂರ ಸಾರಲಾಗಿದೆ. ಹಳ್ಳಿಗಳಲ್ಲಿ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.