ಚಾಮರಾಜನಗರ: ಕೂಲಿ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡು ಕೇರಳದ ಲಾಟರಿ ಮಾರುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆಯ ಹಳ್ಳದಕೇರಿಯ ನಾಗೇಶ್ ಅಲಿಯಾಸ್ ಜಿಂಗ (45) ಬಂಧಿತ ಆರೋಪಿ. ಪಟ್ಟಣದ ಹೊರವಲಯದಲ್ಲಿ ಸೊಂಟಕ್ಕೆ ಲಾಟರಿ ಟಿಕೆಟ್ ಕಂತೆಗಳನ್ನು ಸಿಕ್ಕಿಸಿಕೊಂಡು ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪಿಎಸ್ಐ ಲತೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಖದೀಮನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 900 ಲಾಟರಿ ವಶಪಡಿಕೊಂಡಿದ್ದು, ಇದರ ಮೌಲ್ಯ 40 ಸಾವಿರ ರೂ.ಗೂ ಹೆಚ್ಚಿದೆ ಎನ್ನಲಾಗಿದೆ.
ಈತ ಹಲವು ದಿನಗಳಿಂದಲೂ ಕೇರಳಕ್ಕೆ ಹೋಗಿ ಅಲ್ಲಿಂದ ಕಂತೆ ಕಂತೆ ಲಾಟರಿಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.