ಚಾಮರಾಜನಗರ/ತಮಿಳುನಾಡು: ಅಕ್ರಮವಾಗಿ ಕರ್ನಾಟಕದ ಮದ್ಯವನ್ನು ಮಾರಾಟ ಮಾಡುತ್ತಿದ್ದ ಐವರನ್ನು ತಮಿಳುನಾಡು ಪೊಲೀಸರು ಬಂಧಿಸಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿಯಾದ ತಾಳವಾಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆದಿದೆ.
ತಾಳವಾಡಿಯಲ್ಲಿ ಕಲೀಮುಲ್ಲಾ, ಹೊಸೂರು ಗ್ರಾಮದಲ್ಲಿ ಶೇಖರ್, ಅರಳವಾಡಿಯಲ್ಲಿ ಮಾದೇವ, ನೈತಾಳಪುರಂನಲ್ಲಿ ನಾಗೇಶ್ ಹಾಗೂ ತಲೈಮಲೈನಲ್ಲಿ ಮಂಜುನಾಥ ಎಂಬವರನ್ನು ಈರೋಡ್ ಎಸ್ಪಿ ತಂಗದೊರೈ ಮಾರ್ಗದರ್ಶನದಲ್ಲಿ ತಮಿಳುನಾಡಿನ ವಿಶೇಷ ದಳದ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೊರೊನಾ ತಡೆಗಾಗಿ ತಮಿಳುನಾಡಿನಲ್ಲಿ ಕಠಿಣ ಲಾಕ್ಡೌನ್ ಜಾರಿಯಿದ್ದು, ಮದ್ಯದಂಗಡಿ ಬಂದ್ ಮಾಡಲಾಗಿದೆ. ರಾಜ್ಯದ ಮದ್ಯದಂಗಡಿಗಳಿಂದ ಸರಕನ್ನು ಕೊಂಡೊಯ್ದು ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿ ದಿಢೀರ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ರೂ. ಮೌಲ್ಯದ 2,500ಕ್ಕೂ ಅಧಿಕ ಮದ್ಯದ ಬಾಟಲಿಗಳು, ಒಂದು ಕಾರ್ ಹಾಗೂ ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಪೊಲೀಸರು ಎಲ್ಲೆಡೆ ನಾಕಬಂದಿ ಹಾಕಿದ್ದಾರೆ. ಓರ್ವ ಗ್ರಾಹಕನಿಗೆ ಇಂತಿಷ್ಟು ಮದ್ಯ ಕೊಡಬೇಕೆಂಬ ಸೂಚನೆಯೂ ಇದ್ದರೂ ಇವೆಲ್ಲದರ ನಡುವೆ ತಮಿಳುನಾಡಿನ ಹಳ್ಳಿಗಳಲ್ಲಿ ಕರ್ನಾಟಕದ ಮದ್ಯ ಘಾಟೆಬ್ಬಿಸುತ್ತಿರುವುದು ವಿಪರ್ಯಾಸ.